ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಮುಂಬೈ ಉತ್ತರ ಕೇಂದ್ರ ಲೋಕಸಭೆ ಕ್ಷೇತ್ರದ ಹಾಲಿ ಸಂಸದೆ ಪೂನಂ ಮಹಾಜನ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಬದಲಿಗೆ ಮುಂಬೈ ದಾಳಿ ಮತ್ತು 1993ರ ಸರಣಿ ಸ್ಫೋಟ ಪ್ರಕರಣಗಳಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕೆಲಸ ಮಾಡಿದ್ದ ಖ್ಯಾತ ವಕೀಲ ಉಜ್ವಲ್ ನಿಕಮ್ ಅವರನ್ನು ಕಮಲ ಪಾಳೆಯ ಕಣಕ್ಕಿಳಿಸಿದೆ.
ಪ್ರತಿಷ್ಠಿತ ಕ್ಷೇತ್ರವಾದ ಮುಂಬೈ ಉತ್ತರ ಕೇಂದ್ರಕ್ಕೆ ಕಾಂಗ್ರೆಸ್ ಪಕ್ಷವು ತನ್ನ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಅಭ್ಯರ್ಥಿಯಾಗಿ ವರ್ಷಾ ಗಾಯಕ್ವಾಡ್ ಅವರಿಗೆ ಶುಕ್ರವಾರವಷ್ಟೇ ಟಿಕೆಟ್ ಅಂತಿಮಗೊಳಿಸಿದೆ. ಇದರ ಬೆನ್ನಲ್ಲೇ, ಆಡಳಿತಾರೂಢ ಬಿಜೆಪಿ ತನ್ನ ಹಾಲಿ ಸಂಸದೆ ಪೂನಂ ಮಹಾಜನ್ ಅವರಿಗೆ ಟಿಕೆಟ್ ಕೊಡದೆ ಉಜ್ವಲ್ ನಿಕಮ್ ಅವರಿಗೆ ಮಣೆ ಹಾಕಿದೆ. 26/11ರ ಭಯೋತ್ಪಾದನಾ ದಾಳಿಯ ಪ್ರಕರಣದಲ್ಲಿ ಏಕೈಕ ಉಗ್ರ ಅಜ್ಮಲ್ ಕಸಬ್‌ನನ್ನು ಜೀವಂತವಾಗಿ ಸೆರೆಹಿಡಿಯಲಾಗಿತ್ತು. ನೂರು ಆರೋಪಿಗಳನ್ನು ಅಪರಾಧಿಗಳೆಂದು ಸಾಬೀತು ಪಡಿಸಿ, ಕಸಬ್‌ನನ್ನು ಗಲ್ಲಿಗೇರಿಸಲಾಗಿತ್ತು. ಈ ಪ್ರಕರಣದಿಂದ ನಿಕಮ್ ಸರ್ಕಾರಿ ವಕೀಲರಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು.
ಬಿಜೆಪಿ ಟಿಕೆಟ್ ಘೋಷಿಸಿದ ಬಳಿಕ ಮೊದಲ ಬಾರಿಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬಡವರು ಮತ್ತು ದುರ್ಬಲರಿಗೆ ಕಾನೂನು ಪ್ರಮುಖ ಬೆಂಬಲವಾಗಿದೆ. ಈ ದೃಷ್ಟಿಯಿಂದ ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಯಾವುದೇ ಧಕ್ಕೆಯಾಗದಂತೆ ನಾನು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ನ್ಯಾಯಾಲಯದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಕಡಿಮೆ ಅಂದಾಜು ಮಾಡುತ್ತಿದ್ದೆ. ಚುನಾವಣಾ ಕಣದಲ್ಲಿ ಹಾಗೆ ಮಾಡುವುದಿಲ್ಲ ಎಂದು ತಿಳಿಸಿದರು.