ಕರ್ನಾಟಕ

karnataka

ETV Bharat / bharat

ಬಿಲ್ಕಿಸ್ ಬಾನೊ ಪ್ರಕರಣ: 11 ಅಪರಾಧಿಗಳ ಶರಣಾಗತಿ, ಮತ್ತೆ ಜೈಲುವಾಸ - ಬಿಲ್ಕಿಸ್ ಬಾನೋ ಪ್ರಕರಣ

ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶದ ನಂತರ, ಎಲ್ಲಾ ಹನ್ನೊಂದು ಅಪರಾಧಿಗಳು ಗುಜರಾತ್‌ನ ಗೋಧ್ರಾ ಸಬ್​ ಜೈಲಿನ ಅಧಿಕಾರಿಗಳೆದುರು ಶರಣಾಗಿದ್ದಾರೆ.

Bilkis Bano case convicts surrender  Godhra jail Gujarats Panchmahal  ಬಿಲ್ಕಿಸ್ ಬಾನೋ ಪ್ರಕರಣ  11 ಅಪರಾಧಿಗಳು ಶರಣಾಗತಿ
ಬಿಲ್ಕಿಸ್ ಬಾನೋ ಪ್ರಕರಣ: ಗೋಧ್ರಾ ಸಬ್​ಜೈಲಿನ ಅಧಿಕಾರಿಗಳ ಮುಂದೆ 11 ಅಪರಾಧಿಗಳು ಶರಣಾಗತಿ

By ETV Bharat Karnataka Team

Published : Jan 22, 2024, 10:17 AM IST

ಗೋಧ್ರಾ:ಸುಪ್ರೀಂ ಕೋರ್ಟ್ ನೀಡಿದ ಗಡುವಿನ ನಂತರ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ 11 ಅಪರಾಧಿಗಳು ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಸಬ್​ ಜೈಲಿನ ಅಧಿಕಾರಿಗಳೆದುರು ಭಾನುವಾರ ತಡರಾತ್ರಿ ಶರಣಾದರು. ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಎನ್.ಎಲ್.ದೇಸಾಯಿ ಪ್ರತಿಕ್ರಿಯಿಸಿ, "ಎಲ್ಲ ಅಪರಾಧಿಗಳು ಭಾನುವಾರ ತಡರಾತ್ರಿ ಜೈಲು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ" ಎಂದು ಹೇಳಿದರು.

ಈ ಪ್ರಕರಣದಲ್ಲಿ ಹನ್ನೊಂದು ಅಪರಾಧಿಗಳಿಗೆ ಗುಜರಾತ್ ಸರ್ಕಾರ ನೀಡಿದ್ದ ಕ್ಷಮಾದಾನವನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಜನವರಿ 8ರಂದು ಮಹತ್ವದ ತೀರ್ಪು ನೀಡಿತ್ತು. ಇದರೊಂದಿಗೆ 2022ರ ಸ್ವಾತಂತ್ರ್ಯ ದಿನದಂದು ಅವಧಿಗೂ ಮುನ್ನ ಬಿಡುಗಡೆಗೊಂಡ ಅಪರಾಧಿಗಳು ಎರಡು ವಾರಗಳಲ್ಲಿ ಶರಣಾಗುವಂತೆ ನ್ಯಾಯಾಲಯ ಸೂಚಿಸಿತ್ತು. ಕೆಲವು ದಿನಗಳ ಹಿಂದೆ ಅಪರಾಧಿಗಳಿಗೆ ಶರಣಾಗಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿ ಭಾನುವಾರದೊಳಗೆ ಶರಣಾಗುವಂತೆ ಆದೇಶಿಸಿತ್ತು.

ಕ್ಷಮಾದಾನದ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಮಹಾರಾಷ್ಟ್ರದಲ್ಲಿ ವಿಚಾರಣೆ ನಡೆದಿರುವುದರಿಂದ ಅಪರಾಧಿಗಳಿಗೆ ಅವಧಿಪೂರ್ವ ಬಿಡುಗಡೆ ನೀಡಲು ಗುಜರಾತ್ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ತೀರ್ಪು ನೀಡಿತ್ತು. ಕೋರ್ಟ್ ಆದೇಶದ ಕೆಲವು ದಿನಗಳ ನಂತರ, ಅಪರಾಧಿಗಳು ಆರೋಗ್ಯ ವೈಫಲ್ಯ, ಮುಂಬರುವ ಶಸ್ತ್ರಚಿಕಿತ್ಸೆ, ಮಗನ ಮದುವೆ ಮತ್ತು ಮಾಗಿದ ಬೆಳೆಗಳನ್ನು ಕಟಾವು ಮುಂತಾದ ವಿವಿಧ ಆಧಾರದ ಮೇಲೆ ಶರಣಾಗಲು ಹೆಚ್ಚಿನ ಸಮಯ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಶುಕ್ರವಾರ ಕೋರ್ಟ್ ವಜಾಗೊಳಿಸಿದ್ದು, ಉಲ್ಲೇಖಿಸಿದ ಕಾರಣಗಳು ಯಾವುದೇ ಅರ್ಹತೆ ಹೊಂದಿಲ್ಲ ಎಂದು ಹೇಳಿದೆ.

ಈ ಅಪರಾಧಿಗಳಲ್ಲಿ ಬಕಾಭಾಯಿ ವೋಹಾನಿಯಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಗೋವಿಂದ್, ಜಸ್ವಂತ್, ಮಿತೇಶ್ ಭಟ್, ಪ್ರದೀಪ್ ಮೋರ್ಧಿಯಾ, ರಾಧೇಶ್ಯಾಮ್ ಶಾ, ರಾಜುಭಾಯ್ ಸೋನಿ, ರಮೇಶ್ ಮತ್ತು ಶೈಲೇಶ್ ಭಟ್ ಸೇರಿದ್ದಾರೆ. ಇವರೆಲ್ಲರೂ ಪಂಚಮಹಲ್ ಬಳಿಯ ದಾಹೋದ್ ಜಿಲ್ಲೆಯ ಸಿಂಗ್ವಾಡ್ ಮತ್ತು ರಂಧಿಕ್ಪುರ್ ಗ್ರಾಮಗಳ ನಿವಾಸಿಗಳು.

ಪ್ರಕರಣದ ಹಿನ್ನೆಲೆ:ಫೆಬ್ರವರಿ 2002ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ನಂತರ ಗುಜರಾತ್‌ನಲ್ಲಿ ಭುಗಿಲೆದ್ದ ಭಾರಿ ಕೋಮುಗಲಭೆಯ ಸಮಯದಲ್ಲಿ ಬಿಲ್ಕಿಸ್ ಬಾನೊ 21 ವರ್ಷ ಮತ್ತು ಐದು ತಿಂಗಳ ಗರ್ಭಿಣಿಯಾಗಿದ್ದರು. ಗಲಭೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಮತ್ತು ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ:ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ: ಹೀಗಿದೆ ಕಾರ್ಯಕ್ರಮದ ಸಂಪೂರ್ಣ ವಿವರ

ABOUT THE AUTHOR

...view details