ಪಾಟ್ನಾ (ಬಿಹಾರ):ಬಿಹಾರದಲ್ಲಿ ಸರ್ಕಾರಿ ಗುತ್ತಿಗೆ ಆಧಾರಿತ ಶಿಕ್ಷಕರೊಬ್ಬರು ದಯಾಮರಣ ಕೋರಿ ಪ್ರಧಾನಿ ಕಚೇರಿ, ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರವು ಶಿಕ್ಷಕರ ವಲಯದಲ್ಲಿ ಸಂಚಲನ ಮೂಡಿಸಿದೆ.
ಭಾಗಲ್‌ಪುರದ ನವ್‌ಗಾಚಿಯಾದ ಶಿಕ್ಷಕ ಘನಶ್ಯಾಮ್ ಕುಮಾರ್ ಎಂಬುವವರೇ ದಯಾಮರಣ ಕೋರಿದ್ದಾರೆ. ಇವರಿಗೆ ಮೂವರು ಹೆಣ್ಣು, ಇಬ್ಬರು ಗಂಡು ಸೇರಿ ಒಟ್ಟು ಐವರು ಮಕ್ಕಳು ಇದ್ದಾರೆ. ಇದರಲ್ಲಿ ಇಬ್ಬರು ಗಂಡು ಮಕ್ಕಳು ಡಿಎಂಡಿ ಅಂದರೆ ಡುಚೆನ್ ಮಸ್ಕ್ಯುಲರ್ ಡಿಸ್ಟ್ರೋಫಿಯಿಂದ ಬಳಲುತ್ತಿದ್ದಾರೆ. 17 ವರ್ಷದ ಅನಿಮೇಶ್ ಅಮನ್ ಒಂಬತ್ತನೇ ತರಗತಿ, 9 ವರ್ಷದ ಎರಡನೇ ಮಗ ಅನುರಾಗ್ ಆನಂದ್ ಮೂರನೇ ತರಗತಿ ಓದುತ್ತಿದ್ದು, ಶೇ.80ಕ್ಕಿಂತ ಹೆಚ್ಚು ಅಂಗವೈಕಲ್ಯಕ್ಕೆ ಗುರಿಯಾಗಿದ್ದಾರೆ.
ತಮ್ಮ ಮಕ್ಕಳ ಕಾಯಿಲೆ ಬಗ್ಗೆ 'ಈಟಿವಿ ಭಾರತ್' ಜೊತೆಗೆ ಮಾಹಿತಿ ಹಂಚಿಕೊಂಡ ಶಿಕ್ಷಕ ಘನಶ್ಯಾಮ್ ಕುಮಾರ್, ನನ್ನ ಮಕ್ಕಳಿಬ್ಬರೂ ವಾಸಿಯಾಗದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಇದರಿಂದ ದಿನೇ ದಿನೇ ಸಾವಿನತ್ತ ಸಾಗುತ್ತಿದ್ದಾರೆ. ನಾನು ನಿಯೋಜಿತ (ಗುತ್ತಿಗೆ) ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ವರ್ಗಾವಣೆ ಮಾಡಿದರೆ ನನ್ನ ಇಬ್ಬರು ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ?. ಇದುವರೆಗೆ ಅವರಿಬ್ಬರಿಗೂ 50ರಿಂದ 60 ಲಕ್ಷ ರೂಪಾಯಿ ಖರ್ಚು ಮಾಡಿದರೂ ಅವರ ಕಾಯಿಲೆ ಇನ್ನೂ ಗುಣಮುಖವಾಗಿಲ್ಲ. ದೇಶಾದ್ಯಂತ ಸುಮಾರು 6 ರಿಂದ 7 ರಾಜ್ಯಗಳಲ್ಲಿ ಚಿಕಿತ್ಸೆ ಕೊಡಿಸಿ ಸುಸ್ತಾಗಿದ್ದೇನೆ ಎಂದು ಅಳಲು ತೋಡಿಕೊಂಡರು.