ಜೋರ್ಹತ್, ಅಸ್ಸಾಂ: ಐದು ವರ್ಷಗಳ ಹಿಂದೆ ಬಿಹಾರದಲ್ಲಿ ಭಾರಿ ಪ್ರವಾಹ ಉಂಟಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದರು. ಅವರು ಪ್ರವಾಹದಿಂದ ಹೇಗೋ ಬಚಾವ್ ಆಗಿ ಅಸ್ಸಾಂಗೆ ಆಗಮಿಸಿದ್ದರು.
ಕಳೆದ ಐದು ವರ್ಷಗಳಿಂದ ಅಸ್ಸಾಂನಲ್ಲಿದ್ದ ಇವರು ಕೊನೆಗೂ ತಮ್ಮ ಕುಟುಂಬದೊಂದಿಗೆ ಸಂವಹನ ಮಾಡುವ ಅವಕಾಶ ಪಡೆದು ಗೂಡು ಸೇರಿದ್ದಾರೆ. ಹೀಗೆ ಐದು ವರ್ಷಗಳ ಬಳಿಕ ಕುಟುಂಬ ಸೇರಿದ ಇವರ ಹೆಸರು ಬಲವಂತ ಚೌಧರಿ.
ಪ್ರವಾಹದ ಹೊಡೆತದಿಂದ ಜರ್ಜರಿತರಾಗಿದ್ದ ಬಲವಂತ್ ಚೌಧರಿ ಜೋರ್ಹತ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹಳ ದಿನಗಳಿಂದ ಇವರು ಇಲ್ಲಿನ ಆಸ್ಪತ್ರೆ ಖಾಯಂ ನಿವಾಸಿಯಾದಂತಾಗಿದ್ದರು. ಇವರು ಬಹಳ ದಿನಗಳ ಕಾಲ ಆಸ್ಪತ್ರೆ ಬೆಡ್ ಆಕ್ರಮಿಸಿಕೊಂಡಿದ್ದರಿಂದ ಆಸ್ಪತ್ರೆ ಪ್ರಾಧಿಕಾರ ಇವರನ್ನು ಅಲ್ಲಿಂದ ಹೊರ ಹಾಕಿತ್ತು.
ಇಲ್ಲಿಂದ ಬಿಡುಗಡೆ ಆದ ಬಳಿಕ ದಿಕ್ಕು ತೋಚದಾದ ಇವರು ಮಾಧ್ಯಮಗಳ ನೆರವಿನಿಂದ ಹಾಗೂ ಮೋರಿಯಾನಿ ಶಾಸಕಿ ರೂಪಜ್ಯೋತಿ ಕುರ್ಮಿ ಅವರಿಂದ ರಕ್ಷಿಸಲ್ಪಟ್ಟಿದ್ದರು. ಶಾಸಕರು ಇವರನ್ನು ಜೋರ್ಹತ್‌ನ ಟಿಟಾಬೋರ್‌ನಲ್ಲಿರುವ ಶಿವಾಶ್ ಎಂಬ ಆಶ್ರಯಧಾಮಕ್ಕೆ ಕಳುಹಿಸಿಕೊಟ್ಟಿದ್ದರು.
ಕೆಲ ದಿನಗಳ ನಂತರ ಬಲವಂತ್ ಚೌಧರಿ ಅವರ ಆರೋಗ್ಯ ಹದ ಗೆಟ್ಟಿದ್ದರಿಂದ ಇವರನ್ನು ಚಿಕಿತ್ಸೆಗಾಗಿ ಮತ್ತೆ ಜೋರ್ಹತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆಶ್ರಮದ ಮಾಲೀಕ ರಿಮ್ಜಿಮ್ ಮಹಂತ ಅವರು ಬಿಹಾರ ಮೂಲದ ವ್ಯಕ್ತಿಯ ವಿಳಾಸವನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದರು.
ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಅವರ ಬಗ್ಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಬಲವಂತ್ ಚೌಧರಿ ಅವರ ಕುಟುಂಬ ಸದಸ್ಯರು ಜೋರ್ಹತ್ ಗೆ ಆಗಮಿಸಿದ್ದರು. ಈ ವೇಳೆ ಅವರು ಶಾಸಕಿ ರೂಪಜ್ಯೋತಿ ಕುರ್ಮಿ ಅವರನ್ನು ಭೇಟಿ ಮಾಡಿದರು. ಅವರ ನೆರವಿನಿಂದ ಬಲವಂತ ಚೌಧರಿಯನ್ನು ಕುಟುಂಬದವರ ಜತೆ ಬಿಹಾರದ ಅವರೂರಿಗೆ ಕಳುಹಿಸಿ ಕೊಡಲಾಗಿದೆ.
ಇದನ್ನು ಓದಿ:ಕೋಟಾದಲ್ಲಿ ಮುಂದುವರಿದ ಸಾವಿನ ಸರಣಿ: ಬಿಹಾರದ 16 ವರ್ಷದ ವಿದ್ಯಾರ್ಥಿ ಶವವಾಗಿ ಪತ್ತೆ