ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ' ನೀಡಬೇಕೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಒತ್ತಾಯಿಸಿದ್ದಾರೆ. ಬೇಗುಸರಾಯ್ನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಗ್, ಇಬ್ಬರೂ ನಾಯಕರು ತಮ್ಮ ತಮ್ಮ ರಾಜ್ಯಗಳಿಗೆ ನೀಡಿದ ಮಹತ್ವದ ಕೊಡುಗೆಗಳನ್ನು ಉಲ್ಲೇಖಿಸಿದರು.
ಲಾಲು ಪ್ರಸಾದ್ ಯಾದವ್ ಅವರ ದುರಾಡಳಿತ, ಮೂಲಸೌಕರ್ಯ ಕೊರತೆ ಮತ್ತು ಸಾರ್ವಜನಿಕ ಸೇವೆಗಳ ಕುಸಿತದಿಂದ ಕುಖ್ಯಾತಿಯಾಗಿದ್ದ ಜಂಗಲ್ ರಾಜ್ ಯುಗದಿಂದ ಬಿಹಾರವನ್ನು ಹೊರತರುವಲ್ಲಿ ನಿತೀಶ್ ಕುಮಾರ್ ಅವರ ಪಾತ್ರವನ್ನು ಸಿಂಗ್ ಶ್ಲಾಘಿಸಿದರು. ರಸ್ತೆ, ಆಸ್ಪತ್ರೆಗಳು ಮತ್ತು ಶಾಲಾ ವ್ಯವಸ್ಥೆಗಳಲ್ಲಿ ಆಮೂಲಾಗ್ರ ಸುಧಾರಣೆಗಳಾಗಿದ್ದು, ಈ ಅಭಿವೃದ್ಧಿಗೆ ನಿತೀಶ್ ಕುಮಾರ್ ಅವರ ಆಡಳಿತವೇ ಕಾರಣವಾಗಿದೆ ಎಂದು ಅವರು ಹೇಳಿದರು.
ಹಾಗೆಯೇ ಒಡಿಶಾದಲ್ಲಿ ನವೀನ್ ಪಟ್ನಾಯಕ್ ಅವರ ನಿರಂತರ ಅಧಿಕಾರಾವಧಿಯನ್ನು ಶ್ಲಾಘಿಸಿದ ಅವರು, ದಶಕಗಳಿಂದ ಅವರ ಸಮರ್ಪಣೆ ಮತ್ತು ಸೇವೆಯನ್ನು ಕೊಂಡಾಡಿದರು.
"ಈ ನಾಯಕರ ಕೊಡುಗೆಗಳನ್ನು ಭಾರತ ರತ್ನ ಪ್ರಶಸ್ತಿಯನ್ನು ನೀಡುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕು. ಇವರ ಪ್ರಯತ್ನಗಳು ಲಕ್ಷಾಂತರ ಜನರ ಜೀವನದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿವೆ ಮತ್ತು ಆಡಳಿತದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಿವೆ" ಎಂದು ಸಿಂಗ್ ಹೇಳಿದರು.