ಬೆತುಲ್ (ಮಧ್ಯಪ್ರದೇಶ) :ಯಾವುದೋ ಕಾರಣಕ್ಕಾಗಿ ಆದಿವಾಸಿ ಯುವಕನ ಮೇಲೆ ಗುಂಪೊಂದು ದಾರುಣವಾಗಿ ಹಲ್ಲೆ ನಡೆಸಿದೆ. ವಿವಸ್ತ್ರಗೊಳಿಸಿ, ತಲೆಕೆಳಗೆ ನೇತು ಹಾಕಿ ಮನಬಂದಂತೆ ಹಲ್ಲೆ ಮಾಡಲಾಗಿದೆ. ಘಟನೆ ಮೂರು ತಿಂಗಳ ಹಿಂದೆ ನಡೆದಿದೆ ಎಂದು ಹೇಳಲಾಗಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ. ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಧ್ಯಪ್ರದೇಶದ ಬೆತುಲ್ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಗುಂಪೊಂದು, ಬುಡಕಟ್ಟು ಸಮುದಾಯದ ಯುವಕನನ್ನು ಬೆತ್ತಲೆಗೊಳಿಸಿ, ತಲೆಕೆಳಗೆ ನೇತುಹಾಕಿದೆ. ಬಳಿಕ ನಿಂದಿಸುತ್ತಾ ಬೆಲ್ಟ್ ಮತ್ತು ದೊಣ್ಣೆಗಳಿಂದ ಹೊಡೆಯಲಾಗಿದೆ. ಆರೋಪಿಗಳೇ ಮಾಡಿರುವ ವಿಡಿಯೋದಲ್ಲಿ ಕ್ರೂರತ್ವವನ್ನು ಕಾಣಬಹುದು. ಘಟನೆ ನಡೆದು ಮೂರು ತಿಂಗಳ ನಂತರ ಯುವಕ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾನೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಕಳೆದ ವರ್ಷದ ನವೆಂಬರ್ 15 ರಂದು ಸಂತ್ರಸ್ತ ರಿಂಕೇಶ್ ಚೌಹಾಣ್ ಬೆತುಲ್‌ಗೆ ಬಂದಿದ್ದಾಗ, ಮನೆಯೊಂದರಲ್ಲಿದ್ದ 6-7 ಜನ ಕಿಡಿಗೇಡಿಗಳು ಯಾವುದೋ ಕಾರಣಕ್ಕಾಗಿ ಕಿತ್ತಾಡಿದ್ದಾರೆ. ಬಳಿಕ ರಿಂಕೇಶ್ನನ್ನು ಅದೇ ಮನೆಯಲ್ಲಿ ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಗಿದೆ. ಬಳಿಕ ಉಲ್ಟಾ ನೇತು ಹಾಕಿ ಬಡಿಗೆಗಳಿಂದ ಹೊಡೆಯಲಾಗಿದೆ. ನೋವಿನಿಂದ ಯುವಕ ಕಿರುಚುತ್ತಿದ್ದರೂ ಆರೋಪಿಗಳು ಹೀನಾಯವಾಗಿ ನಡೆದುಕೊಂಡಿದ್ದಾರೆ.