ನವದೆಹಲಿ : ಚೀನಾದ ಕಂಪನಿಗಳೊಂದಿಗೆ ಯಾವುದೇ ವ್ಯವಹಾರ ನಡೆಸುವ ಮುನ್ನ ಕೆಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಸ್ಎಂಇ) ಸಲಹೆ ನೀಡಿದೆ. ಚೀನಾದಲ್ಲಿನ ಚೀನಾ ಕಂಪನಿಗಳೊಂದಿಗೆ ವ್ಯವಹಾರ ನಡೆಸುವ ಭಾರತೀಯ ಕಂಪನಿಗಳು ಸಮಸ್ಯೆಗಳನ್ನು ಎದುರಿಸುತ್ತಿರುವ ಹಲವಾರು ಪ್ರಕರಣಗಳು ನಿರಂತರವಾಗಿ ರಾಯಭಾರ ಕಚೇರಿಯ ಗಮನಕ್ಕೆ ಬರುತ್ತಿರುವುದರಿಂದ ಈ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಸಲಹೆಯಲ್ಲಿ ತಿಳಿಸಲಾಗಿದೆ.
ಯಾವುದೇ ಚೀನೀ ಕಂಪನಿಯೊಂದಿಗೆ ವ್ಯವಹಾರ ಮಾಡುವ ಮೊದಲು, ಆ ಕಂಪನಿಗಳ ವಿಶ್ವಾಸಾರ್ಹತೆ ತಿಳಿದುಕೊಳ್ಳಲು ಭಾರತೀಯ ಕಂಪನಿಗಳು ಶಾಂಘೈ (hoc.shanghai@mea.gov.in), ಗುವಾಂಗ್ ಝೌ (com.guangzhou@mea.gov.in) ಮತ್ತು ಹಾಂಕಾಂಗ್ (commerce.hongkong@mea.gov.in) ನಲ್ಲಿರುವ ಭಾರತೀಯ ರಾಯಭಾರ ಕಚೇರಿ (com.beijing@mea.gov.in, ccom.beijing@mea.gov.in) ಅಥವಾ ಭಾರತೀಯ ದೂತಾವಾಸಗಳಿಗೆ ಪತ್ರ ಬರೆಯಬೇಕು ಎಂದು ಸಲಹೆಯಲ್ಲಿ ಶಿಫಾರಸು ಮಾಡಲಾಗಿದೆ. ಆಯಾ ದೂತಾವಾಸ ಕಚೇರಿಗಳು 4 ರಿಂದ 5 ಕೆಲಸದ ದಿನಗಳಲ್ಲಿ ಪತ್ರಕ್ಕೆ ಪ್ರತಿಕ್ರಿಯಿಸುತ್ತವೆ.
ದೊಡ್ಡ ಮೊತ್ತದ ವಹಿವಾಟುಗಳ ಸಂದರ್ಭದಲ್ಲಿ ಭಾರತೀಯ ಕಂಪನಿಗಳು ಬಿಸಿನೆಸ್ ಕನ್ಸಲ್ಟನ್ಸಿ ಕಂಪನಿಗಳ ಸಲಹೆ ಪಡೆದು ಮುಂದುವರಿಯಬೇಕು ಎಂದು ಶಿಫಾರಸು ಮಾಡಲಾಗಿದೆ. ಬಿಸಿನೆಸ್ ಕನ್ಸಲ್ಟನ್ಸಿ ಸಂಸ್ಥೆಗಳು ಚೀನಾ ಕಂಪನಿಗಳ ವ್ಯವಹಾರ ಪಾರದರ್ಶಕತೆ, ಹಣಕಾಸು ಸ್ಥಿತಿ, ಖ್ಯಾತಿ, ವಿಶ್ವಾಸಾರ್ಹತೆ ಮತ್ತು ರುಜುವಾತುಗಳ ಬಗ್ಗೆ ವರದಿ ನೀಡುತ್ತವೆ ಎಂದು ಸಲಹೆಯಲ್ಲಿ ತಿಳಿಸಲಾಗಿದೆ.