ಭುವನೇಶ್ವರ್: ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ಬಳಿಕ ನಡೆಯುತ್ತಿರುವ ಬಾಂಗ್ಲಾದೇಶದ ರಾಜಕೀಯ ವಿದ್ಯಾಮಾನಗಳು ಭಾರತದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗಲಾ ಈ ಟಿವಿ ಭಾರತ್ಗೆ ತಿಳಿಸಿದ್ದಾರೆ. ಈಟಿವಿ ಭಾರತದೊಂದಿಗೆ ಬಾಂಗ್ಲಾದೇಶದಲ್ಲಿ ಬಿಕ್ಕಟ್ಟಿನಿಂದ ನೆರೆ ದೇಶದೊಂದಿಗಿನ ಭಾರತದ ಸಂಬಂಧಗಳ ಮೇಲೆ ಉಂಟಾಗುವ ಪರಿಣಾಮ ಕುರಿತು ಮಾತನಾಡಿದ ಅವರು, ಈ ಪರಿಸ್ಥಿತಿಯು ಸಂಕೀರ್ಣವಾಗಿದೆ ಎಂದಿದ್ದಾರೆ.
ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತವೂ ಅವರ ರಾಜೀನಾಮೆಯಿಂದ ಅಂತ್ಯಗೊಂಡಿದೆ. ಬಾಂಗ್ಲಾದೇಶದಲ್ಲಿ ಈಗಾಗಲೇ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕಾಗಿ ಸರ್ಕಾರಿ ಉದ್ಯೋಗದಲ್ಲಿ ಶೇ 30ರಷ್ಟು ಮೀಸಲಾತಿ ನಿಯಮವಿದೆ. ಆದಾಗ್ಯೂ ಈ ಯೋಜನೆಯನ್ನು ದೇಶದ ಸಾಮಾನ್ಯ ವಿದ್ಯಾರ್ಥಿಗಳು ಬಲವಾಗಿ ವಿರೋಧಿಸಿದರು. ಈ ಹಿನ್ನೆಲೆಯಲ್ಲಿ 2018 ರಲ್ಲಿ ಈ ಮೀಸಲಾತಿಯನ್ನು ಹಸೀನಾ ಹಿಂಪಡೆಯಲು ನಿರ್ಧರಿಸಿದರು ಎಂದರು.
ಆದಾಗ್ಯೂ, ಬಾಂಗ್ಲಾದೇಶ ಹೈಕೋರ್ಟ್ ಈ ನಿರ್ಧಾರವನ್ನು ಅಮಾನ್ಯಮಾಡಿ, 1971ರಲ್ಲಿ ದೇಶಕ್ಕೆ ಹೋರಾಡಿದ ಸೇನಾಧಿಕಾರಿಗಳ ಕುಟುಂಬಕ್ಕೆ ಮೀಸಲಾತಿ ನಿಯಮವನ್ನು ಜಾರಿಗೆ ತಂದಿದೆ. ಇದು ವಿದ್ಯಾರ್ಥಿಗಳಲ್ಲಿ ಪ್ರತಿಭಟನೆಯ ಕಿಡಿ ಹೊತ್ತಿಸಿತು.
ಹಸೀನಾ ರಾಜೀನಾಮೆ ಬಳಿಕ ಸೇನಾ ಮುಖ್ಯಸ್ಥ ವಕಾರ್ ಉಜ್ ಜಮಾನ್, ಮಧ್ಯಂತರ ಸರ್ಕಾರ ರಚನೆಯನ್ನು ಘೋಷಿಸಿದರು. ಇದೀಗ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಬಾಂಗ್ಲಾದೇಶದ ಸೇನಾ ಬೆಂಬಲಿತ ಮಧ್ಯಂತರ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಪರಿಸ್ಥಿತಿಯು ದುರ್ಬಲವಾಗಿದ್ದು, ನಾವು ನಮ್ಮ ಹೆಜ್ಜೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದಿದ್ದಾರೆ.