ಕಿಶನ್‌ಗಂಜ್ (ಬಿಹಾರ): ಬಾಂಗ್ಲಾದೇಶದ ಹಿಂದೂ ಹುಡುಗಿಯೊಬ್ಬಳು ರಾತ್ರೋರಾತ್ರಿ ಭಾರತಕ್ಕೆ ಓಡಿ ಬಂದಿದ್ದು, ಅವಳನ್ನು ಗಡಿ ಭದ್ರತಾ ಪಡೆ ವಶಕ್ಕೆ ಪಡೆದು ಚೋಪ್ರಾ ಪೊಲೀಸ್ ಠಾಣೆಗೆ ಒಪ್ಪಿಸಿದೆ. ಬಾಲಕಿಯು ಇಸ್ಕಾನ್ ಭಕ್ತೆ ಎಂದು ತಿಳಿದು ಬಂದಿದ್ದು, ಬಾಂಗ್ಲಾದೇಶದ ಗಡಿ ದಾಟಿ ಭಾರತವನ್ನು ಪ್ರವೇಶಿಸುತ್ತಿದ್ದಂತೆ ಆಕೆಯನ್ನು ಬಂಧಿಸಲಾಗಿದೆ.
ಬಾಂಗ್ಲಾದೇಶದ ಗಡಿ ಪ್ರದೇಶ ಭಾರತದ ಬಿಹಾರಕ್ಕೆ ಹೊಂದಿಕೊಂಡಿದ್ದು, ರಾತ್ರೋರಾತ್ರಿ ಬಾಂಗ್ಲಾದೇಶದಿಂದ ಕಾಲ್ನಡಿಗೆಯಲ್ಲೇ ನೀರಿನ ಪೈಪ್ ಸಹಾಯದಿಂದ ಮುಳ್ಳುತಂತಿಯನ್ನು ಲೆಕ್ಕಿಸದೇ ಭಾರತಕ್ಕೆ ಕಾಲಿಟ್ಟಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಚೋಪ್ರಾ ಠಾಣಾ ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ವಿಚಾರಣೆ ನಡೆಸುತ್ತಿರುವ ಪೊಲೀಸರು:''ಬಿಎಸ್‌ಎಫ್ ಪ್ರಧಾನ ಕಚೇರಿಯ 17ನೇ ಬೆಟಾಲಿಯನ್ ಸೇನಾ ಪಡೆ ವಿಚಾರಣೆ ಬಳಿಕ ಬಾಲಕಿಯನ್ನು ಠಾಣೆಗೆ ಹಸ್ತಾಂತರಿಸಿದೆ. ಬಾಲಕಿಯು ಬಾಂಗ್ಲಾದೇಶದ ಪಂಜಗಢ ಜಿಲ್ಲೆಯ ನಿವಾಸಿ ಎಂದು ತಿಳಿದು ಬಂದಿದ್ದು, ಆಕೆ ಒಬ್ಬಳೇ ಬಂದಿದ್ದಾಳಾ ಅಥವಾ ಅವಳ ಜೊತೆ ಬೇರೆ ಯಾರಾದರೂ ಇದ್ದಾರೆಯೇ? ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ವಿಚಾರಣೆಯಿಂದ ಬಾಲಕಿಯ ಸಂಬಂಧಿಕರು ಜಲ್ಪೈಗುಡಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆಂಬ ಮಾಹಿತಿ ಇದ್ದು, ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಬಾಲಕಿಯು ಬಿಹಾರದ ಲಕ್ಷ್ಮೀಪುರ ತಲುಪಿದ್ದು, ಗಡಿ ದಾಟಿ ಇಲ್ಲಿಗೆ ಹೇಗೆ ತಲುಪಿದಳು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ತಾನು ಪಂಚಗಢದ ನಿವಾಸಿಯಾಗಿದ್ದು, ಕಾಲ್ನಡಿಗೆಯಲ್ಲಿ ಗಡಿ ದಾಟಿ ಬಂದಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಏಕೆ ಗಡಿ ದಾಟಿದಳು? ಈ ಕಡೆಗೆ ಹೇಗೆ ಬಂದಳು? ಇದಕ್ಕೆ ಸಹಾಯ ಮಾಡಿದವರು ಯಾರು? ಎಂಬ ಬಗ್ಗೆಯೂ ತನಿಖೆ ನಡೆಸಿದ್ದೇವೆ. ಚೋಪ್ರಾ ಬ್ಲಾಕ್‌ನಲ್ಲಿರುವ ಫತೇಪುರ್ ಗಡಿ ಪೋಸ್ಟ್ ಬಳಿ ಗಡಿ ಭದ್ರತಾ ಪಡೆ ಆಕೆಯನ್ನು ಗುರುತಿಸಿತ್ತು'' ಎಂದು ಚೋಪ್ರಾ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಗಡಿ ಪ್ರದೇಶವಾಗಿರುವ ಲಕ್ಷ್ಮೀಪುರ:''ಬಿಹಾರದ ಲಕ್ಷ್ಮೀಪುರ ಗಡಿ ಪ್ರದೇಶವಾಗಿದ್ದು, ಮುಳ್ಳುತಂತಿಯಿಂದ ಆವೃತವಾಗಿದೆ. ಇದು ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದರಿಂದ ಇಲ್ಲಿ ದಿನದ 24 ಗಂಟೆಗಳ ಕಾಲ ಗಡಿ ಭದ್ರತಾ ಪಡೆ ತೀವ್ರ ನಿಗಾ ಇಟ್ಟಿರುತ್ತದೆ. ಬಾಂಗ್ಲಾದೇಶದ ಪರಿಸ್ಥಿತಿ ಸದ್ಯ ದಯನೀಯವಾಗಿದೆ. ಅವರು ಇಸ್ಕಾನ್‌ನ ಭಕ್ತರು. ಬಾಂಗ್ಲಾದೇಶದಲ್ಲಿ ಅವರಿಗೆ ಬೆದರಿಕೆ ಹಾಕಲಾಗುತ್ತಿದೆ. ಅಲ್ಲಿ ಇಸ್ಕಾನ್ ಭಕ್ತರು ಮತ್ತು ಹಿಂದೂಗಳು ಸಾಕಷ್ಟು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ'' ಎಂದು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ವಾಸಿಸುತ್ತಿರುವ ಬಾಲಕಿಯ ಸಂಬಂಧಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಣ್ಣಿನ ಚಿಕಿತ್ಸೆಗಾಗಿ ಗಡಿದಾಟಿರುವ ಶಂಕೆ:''ಬಾಲಕಿಯೂ ಇಸ್ಕಾನ್ ಭಕ್ತೆಯಾಗಿದ್ದರಿಂದ ಬೇರೆ ದಾರಿ ಕಾಣದೇ ಅವಸರದಲ್ಲಿ ಇಲ್ಲಿಗೆ ಬಂದಿದ್ದಾಳೆ. ಆಕೆ ಬಳಿ ಮಾನ್ಯವಾದ ಪಾಸ್‌ಪೋರ್ಟ್ ಇದೆ. ಅವಳ ಕಣ್ಣಿಗೆ ಚಿಕಿತ್ಸೆ ಬೇಕಿತ್ತು. ಅದಕ್ಕಾಗಿಯೇ ಇಲ್ಲಿಗೆ ಬಂದಿರಬಹುದು. ಈ ಹಿಂದೆಯೂ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದಳು. ಬಾಲಕಿ ಪ್ರಸಿದ್ಧ ಗಾಯಕಿ ಆಗಿದ್ದು, ಬಾಂಗ್ಲಾದೇಶ ಸೇರಿ ಭಾರತದಲ್ಲೂ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾಳೆ. ಇಸ್ಕಾನ್ ಭಕ್ತರಾಗಿದ್ದರಿಂದ ಅವರಿಗೆ ಕಿರುಕುಳ ನೀಡಲಾಗುತ್ತಿತ್ತು. ಅವರನ್ನು ಅಪಹರಿಸುವ ಪ್ರಯತ್ನವೂ ನಡೆಯುತ್ತಿದೆ. ಹೆತ್ತವರಿಗೆ ಇರುವುದು ಇದೊಂದೇ ಮಗು. ಈ ಕಾರಣಕ್ಕೆ ಪ್ರಾಣ ಉಳಿಸಿಕೊಳ್ಳಲು ಹೇಗೋ ಅಲ್ಲಿಂದ ಓಡಿ ಭಾರತಕ್ಕೆ ಬಂದಿರಬಹುದು'' ಎಂದು ಬಾಲಕಿ ಹಿನ್ನೆಲೆ ಬಗ್ಗೆ ಮತ್ತಷ್ಟು ವಿವರಣೆ ನೀಡಿದ್ದಾರೆ.
ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಧ್ವನಿ ಎತ್ತಿದ್ದಕ್ಕೆ ಇಸ್ಕಾನ್ ಮಾಜಿ ಪಾದ್ರಿ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ನವೆಂಬರ್ 25 ರಂದು ದೇಶದ್ರೋಹದ ಆರೋಪ ಹಿನ್ನೆಲೆಯಲ್ಲಿ ಢಾಕಾ ವಿಮಾನ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಬಾಂಗ್ಲಾ ಹಿಂದೂ ನಾಯಕ ಕೃಷ್ಣದಾಸ್‌ಗಿಲ್ಲ ಜಾಮೀನು; ದಾಳಿ ಭೀತಿಯಿಂದ ವಾದ ಮಂಡಿಸಲು ವಕೀಲರ ಹಿಂದೇಟು - BANGLADESH VIOLENCE