ನವದೆಹಲಿ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ವಿಪಕ್ಷಗಳ ನಾಯಕ ರಾಹುಲ್ ಗಾಂಧಿ ಅವರು ಟೀಕಿಸಿದ್ದಾರೆ. ಬಜೆಟ್ ಅಂಕಿಅಂಶಗಳನ್ನು ಗಮನಿಸಿದರೆ, ಗುಂಡೇಟಿನ ಗಾಯಕ್ಕೆ ಬ್ಯಾಂಡೇಜ್ ಹಾಕಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆ ಪೋಸ್ಟ್ ಹಂಚಿಕೊಂಡಿರುವ ಅವರು, "ಜಾಗತಿಕ ಅನಿಶ್ಚಿತತೆಯ ನಡುವೆ ನಮ್ಮ ದೇಶದ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವ ಮಾದರಿ ಬಜೆಟ್ನ ಅಗತ್ಯವಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮಂಡಿಸಿದ ಮುಂಗಡ ಪತ್ರವು ದೊಡ್ಡ ಗಾಯಕ್ಕೆ ಗುಣಮಟ್ಟದ ಚಿಕಿತ್ಸೆ ನೀಡುವ ಬದಲು ಸಣ್ಣ ಬ್ಯಾಂಡೇಜ್ ಹಾಕಿದೆ" ಎಂದು ಟೀಕಿಸಿದ್ದಾರೆ.
"ಗುಂಡೇಟು ಬಿದ್ದಾಗ ಅದಕ್ಕೆ ಗುಣಮಟ್ಟದ ಚಿಕಿತ್ಸೆ ಮತ್ತು ಆಪರೇಷನ್ ಅಗತ್ಯವಿರುತ್ತದೆ. ಸದ್ಯ ನಮ್ಮ ದೇಶದ ಆರ್ಥಿಕತೆಯೂ ಅದೇ ತರನಾಗಿದೆ. ಬಲ ನೀಡಬೇಕಾದ ಮತ್ತು ಪ್ರಗತಿಯತ್ತ ಕೊಂಡೊಯ್ಯಬೇಕಿದ್ದ ಬಜೆಟ್ ಬದಲಿಗೆ ಸಾಮಾನ್ಯ ಲೆಕ್ಕಪತ್ರವನ್ನು ಸರ್ಕಾರ ಮಂಡಿಸಿದೆ. ಇದೊಂದು ರೀತಿಯಲ್ಲಿ ಸಿದ್ಧಾಂತಗಳ ದಿವಾಳಿತನವಾಗಿದೆ" ಎಂದಿದ್ದಾರೆ.
ಇದಕ್ಕೂ ಮೊದಲು, ಕಾಂಗ್ರೆಸ್ ಪಕ್ಷವು ಬಜೆಟ್ ಅನ್ನು ಟೀಕಿಸಿತ್ತು. "ಮಂಡನೆಯಾದ ಕೇಂದ್ರ ಬಜೆಟ್ ನಿಶ್ಚಲ, ಜನರಿಗೆ ದೂರವಾದ, ಖಾಸಗಿ ಹೂಡಿಕೆಯ ವಿರೋಧಿ ಮತ್ತು ಸಂಕೀರ್ಣ ಜಿಎಸ್‌ಟಿ ವ್ಯವಸ್ಥೆಯಿಂದ ಬಳಲುತ್ತಿರುವ ಆರ್ಥಿಕತೆಗೆ ಬಲ ನೀಡಿಲ್ಲ ಎಂದಿತ್ತು.