ಮುಂಬೈ (ಮಹಾರಾಷ್ಟ್ರ) :ಇಲ್ಲಿನ ಬದ್ಲಾಪುರ್ ಶಾಲೆಯ ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿಯ ಎನ್ಕೌಂಟರ್ಗೆ ಪೊಲೀಸರೇ ಕಾರಣ ಎಂದು ಮ್ಯಾಜಿಸ್ಟ್ರೇಟ್ ತನಿಖೆಯಲ್ಲಿ ಬಹಿರಂಗವಾಗಿದೆ.
ಪೊಲೀಸರ ಎನ್ಕೌಂಟರ್ ಕುರಿತು ಮ್ಯಾಜಿಸ್ಟ್ರೇಟ್ ತನ್ನ ತನಿಖಾ ವರದಿಯನ್ನು ಬಾಂಬೆ ಹೈಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠವು, ಪ್ರಕರಣದಲ್ಲಿ ಭಾಗಿಯಾದ ಐವರು ಪೊಲೀಸರ ವಿರುದ್ಧ ತನಿಖೆ ನಡೆಸಿ ವರದಿ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಮ್ಯಾಜಿಸ್ಟ್ರೇಟ್ ವರದಿಯಲ್ಲೇನಿದೆ?ಪೊಲೀಸರು ಆರೋಪಿಯನ್ನು ಎನ್ಕೌಂಟರ್ ಮಾಡಿದ್ದಾರೆ. ಆತ ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಬಳಿಯಿದ್ದ ರಿವಾಲ್ವರ್ ಕಸಿದು ದಾಳಿ ಮಾಡಿದ್ದ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಸಂಶೋಧನಾ ವರದಿಯಲ್ಲೂ ಸಾಬೀತಾಗಿಲ್ಲ. ಪಿಸ್ತೂಲಿನ ಮೇಲೆ ಮೃತನ ಬೆರಳಚ್ಚು ಇಲ್ಲ ಎಂದು ವರದಿ ಹೇಳಿದೆ.
ಕೋರ್ಟ್ ಸೂಚನೆ :ನಕಲಿ ಎನ್ಕೌಂಟರ್ ಆರೋಪದಲ್ಲಿ ಥಾಣೆ ಅಪರಾಧ ವಿಭಾಗದ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ಶಿಂಧೆ, ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ನೀಲೇಶ್ ಮೋರೆ, ಹೆಡ್ ಕಾನ್‌ಸ್ಟೆಬಲ್‌ಗಳಾದ ಅಭಿಜೀತ್ ಮೋರ್, ಹರೀಶ್ ತವಾಡೆ ಮತ್ತು ಪೊಲೀಸ್ ವಾಹನ ಚಾಲಕ ಸೇರಿದಂತೆ ಹಲವರು ಭಾಗಿದಾರರು. ಇವರ ವಿರುದ್ಧ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ಕೋರ್ಟ್ ಆದೇಶಿಸಿದೆ.
ಸರ್ಕಾರವು ತನಿಖೆಯ ಆಧಾರದ ಮೇಲೆ ಪ್ರಕರಣ ದಾಖಲಿಸಬೇಕು. ಇದನ್ನು ಯಾವ ಸಂಸ್ಥೆಯ ಮೂಲಕ ತನಿಖೆ ಮಾಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಆರೋಪಿ ಮೇಲೆ ಪೊಲೀಸ್ ಅಧಿಕಾರಿಗಳ ಬಲಪ್ರಯೋಗ ಸಮರ್ಥನೀಯವೇ ಎಂದು ಪ್ರಶ್ನಿಸಿದೆ.
ಎನ್ಕೌಂಟರ್ ವಿರುದ್ಧ ಕುಟುಂಬ ದೂರು :ತಮ್ಮ ಮಗನನ್ನು ಪೊಲೀಸರು ನಕಲಿ ಎನ್ಕೌಂಟರ್ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಅಕ್ಷಯ್ ಶಿಂಧೆ ಅವರ ಕುಟುಂಬಸ್ಥರು ಕೋರ್ಟ್ಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಕೋರ್ಟ್ ಸೂಚಿಸಿತ್ತು. ಎಫ್‌ಎಸ್‌ಎಲ್ ವರದಿಯೂ ಪೊಲೀಸರ ವಿರುದ್ಧವಾಗಿತ್ತು. ಎನ್ಕೌಂಟರ್ನಲ್ಲಿ ಪೊಲೀಸರೇ ತಪ್ಪೆಸಗಿದ್ದಾರೆ ಎಂದು ಮ್ಯಾಜಿಸ್ಟ್ರೇಟ್ ತನಿಖೆಯೂ ಹೇಳಿತ್ತು.
ಏನಿದು ಬದ್ಲಾಪುರ್ ಕೇಸ್?2024ರ ಆಗಸ್ಟ್ನಲ್ಲಿ ಇಲ್ಲಿನ ಬದ್ಲಾಪುರದ ಶಾಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅಕ್ಷಯ್ ಶಿಂಧೆ (24) ಎಂಬಾತನನ್ನು ಬಂಧಿಸಲಾಗಿತ್ತು. ಆತ ಶಾಲೆಯ ಅಟೆಂಡರ್ ಆಗಿದ್ದ. ಈ ಘಟನೆ ಮಹಾರಾಷ್ಟ್ರದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿಯನ್ನು ಎನ್ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿ, ಜನರು ತೀವ್ರ ಪ್ರತಿಭಟನೆ ನಡೆಸಿದ್ದರು.
ಸೆಪ್ಟೆಂಬರ್ 23 ರಂದು, ವಿಚಾರಣೆಗಾಗಿ ಜೈಲಿನಿಂದ ಆರೋಪಿಯನ್ನು ಕರೆದೊಯ್ಯುತ್ತಿದ್ದಾಗ ನಡೆದ ಗುಂಡಿನ ಚಕಮಕಿಯಲ್ಲಿ ಆತ ಸಾವನ್ನಪ್ಪಿದ್ದ. ಪೊಲೀಸ್ ವ್ಯಾನ್‌ನಲ್ಲಿ ಹೋಗುತ್ತಿದ್ದಾಗ, ಸಿಬ್ಬಂದಿಯ ಬಂದೂಕನ್ನು ಕಸಿದುಕೊಂಡು ಆರೋಪಿ ಗುಂಡು ಹಾರಿಸಿದ್ದ, ಇದಕ್ಕೆ ಪ್ರತಿಯಾಗಿ ಪೊಲೀಸರು ದಾಳಿ ನಡೆಸಿದಾಗ ಆತನ ತಲೆಗೆ ಗುಂಡು ತಗುಲಿತು ಎಂದು ಪೊಲೀಸರು ಹೇಳಿದ್ದರು.
ಇದನ್ನೂ ಓದಿ:ಬದ್ಲಾಪುರ್ ಲೈಂಗಿಕ ದೌರ್ಜನ್ಯ ಆರೋಪಿ ತಲೆಗೇ ಗುಂಡು ಹೊಡೆದಿದ್ದೇಕೆ?: ಬಾಂಬೆ ಹೈಕೋರ್ಟ್ - badlapur encounter