ಮುಂಬೈ (ಮಹಾರಾಷ್ಟ್ರ):ಮಾಜಿ ಸಚಿವ ಮತ್ತು ಅಜಿತ್ ಪವಾರ್ ಬಣದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಅಂಶಗಳು ಬಹಿರಂಗವಾಗಿವೆ. ಹತ್ಯೆ ಆರೋಪ ಹೊತ್ತಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿ ಬಾಬಾ ಸಿದ್ದಿಕಿ ಅವರ ಮಗ ಮತ್ತು ಕಾಂಗ್ರೆಸ್ ಶಾಸಕ ಜೀಶನ್ ಸಿದ್ದಿಕಿ ಕೂಡ ಇದ್ದ ಎಂಬುದು ಗೊತ್ತಾಗಿದೆ.
ಬಿಷ್ಣೋಯ್ ಗ್ಯಾಂಗ್ ಬಾಬಾ ಸಿದ್ದಿಕಿ ಜೊತೆಗೆ ಜೀಶನ್ ಸಿದ್ದಿಕಿಯನ್ನು ಕೊಲ್ಲಲು ನಿರ್ಧರಿಸಿತ್ತು. ಸಿದ್ಧಿಕಿ ಹತ್ಯೆ ದಿನದಂದು ಇಬ್ಬರನ್ನು ಅಥವಾ ಯಾರು ಸಿಗುತ್ತಾರೋ ಅವರನ್ನು ಕೊಲ್ಲುವಂತೆ ಆರೋಪಿಗಳಿಗೆ ಗ್ಯಾಂಗ್ ಸೂಚಿಸಿತ್ತು ಎಂದು ತಿಳಿದು ಬಂದಿದೆ.
ಜೀಶನ್ ಸಿದ್ದಿಕಿ ಕಾಂಗ್ರೆಸ್ ಶಾಸಕನಾಗಿದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಮೇಲೆ ಪಕ್ಷ ಆತನನ್ನು ಉಚ್ಚಾಟಿಸಿದೆ. ಬಾಂದ್ರಾದಲ್ಲಿರುವ ಶಾಸಕರ ಕಚೇರಿಯಿಂದ ಬಾಬಾ ಸಿದ್ದಿಕಿ ಮತ್ತು ಜೀಶನ್ ಸಿದ್ದಿಕಿ ಹೊರಗೆ ಬಂದಾಗ ಆರೋಪಿಗಳು ಸಿದ್ದಿಕಿಗೆ ಕಾವಲು ಕಾಯುತ್ತಿದ್ದ ಕಾನ್ಸ್ಟೇಬಲ್ ಕಣ್ಣಿಗೆ ಕಾರದಪುಡಿ ಎರಚಿದ್ದಾರೆ. ಜೊತೆಗೆ ಪೆಪ್ಪರ್ ಸ್ಪ್ರೇ ಕೂಡ ತೆಗೆದುಕೊಂಡು ಹೋಗಿದ್ದಾರೆ. ದಸರಾ ಸಂಭ್ರಮದ ಮಾದರಿಯಲ್ಲಿ ಪಟಾಕಿ ಸಿಡಿಸಿ, ಅದರ ಜೊತೆಗೆ ಗುಂಡು ಹಾರಿಸುವ ಯೋಜನೆ ಹೊಂದಲಾಗಿತ್ತು. ಆದರೆ, ಭದ್ರತಾ ಸಿಬ್ಬಂದಿಯನ್ನು ಕಂಡು ನೇರವಾಗಿ ಶಾಸಕನ ಮೇಲೆ ದಾಳಿ ಮಾಡಲಾಗಿದೆ.
ಪೂರ್ವನಿಯೋಜಿತ ಸಂಚು:ಆರೋಪಿ ಶಿವಕುಮಾರ್ ಶಾಸಕನ ಮೇಲೆ ಐದಾರು ಸುತ್ತು ಗುಂಡು ಹಾರಿಸಿ ಜನರಲ್ಲಿ ನುಸುಳಿ ಪರಾರಿಯಾಗಿದ್ದಾನೆ. ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಮಾತ್ರ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಓಡುತ್ತಿರುವುದು ಕಂಡ ಫೋನ್ ಕಳ್ಳರು ಎಂದು ಜನರು ಭಾವಿಸಿದ್ದರು. ಶಾಸಕನ ಕೊಲೆಗೆ ಮೊದಲೇ ಪೂರ್ವನಿಯೋಜಿತ ಸಂಚು ರೂಪಿಸಲಾಗಿತ್ತು. 25 ಲಕ್ಷ ಸುಪಾರಿಯಲ್ಲಿ ಮೂವರು ಆರೋಪಿಗಳಿಗೆ 50 ಸಾವಿರ ರೂಪಾಯಿ ಮುಂಗಡ ನೀಡಲಾಗಿದೆ.