ಕರ್ನಾಟಕ

karnataka

ETV Bharat / bharat

ಬಾಬಾ ಸಿದ್ದಿಕ್ ಹತ್ಯೆ ಹಿಂದೆ ಗುಜರಾತ್ ಗ್ಯಾಂಗ್‌ಸ್ಟರ್‌ಗಳ ಕೈವಾಡ: ಸಂಜಯ್ ರಾವತ್ ಆರೋಪ - SANJAY RAUT

ಎನ್​ಸಿಪಿ ನಾಯಕ, ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಬಾಬಾ ಸಿದ್ದಿಕ್ ಅವರನ್ನು ಕಳೆದ ಶುಕ್ರವಾರ ಬಾಂದ್ರಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

SANJAY RAUT
ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ (ETV Bharat)

By ETV Bharat Karnataka Team

Published : Oct 14, 2024, 4:12 PM IST

ಮುಂಬೈ: ಗುಜರಾತಿನಲ್ಲಿ ಕುಳಿತ ಕೆಲವರು ಮಹಾರಾಷ್ಟ್ರ ಸರ್ಕಾರವನ್ನು ಆಳುತ್ತಿದ್ದಾರೆ ಎನ್ನುತ್ತಾ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ಅಜಿತ್ ಪವಾರ್, ಗೃಹ ಸಚಿವ ದೇವೇಂದ್ರ ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂಬೈನಲ್ಲಿ ನಡೆಯುತ್ತಿರುವ ಗ್ಯಾಂಗ್​ ವಾರ್‌ಗಳ ಹಿಂದೆ ಗುಜರಾತ್ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್​ಗಳ ಕೈವಾಡ ಇರುವುದು ಸ್ಪಷ್ಟ. ಮುಂಬೈನಲ್ಲಿ ನಡೆಯುತ್ತಿರುವ ಗ್ಯಾಂಗ್ ವಾರ್ ಮತ್ತು ಭೂಗತ ಲೋಕದ ಜಾತಕಗಳ ಬಗ್ಗೆ ಈ ಹಿಂದೆಯೂ ಹೇಳಿದ್ದೆ. ಈ ಸರ್ಕಾರಕ್ಕೂ ಭೂಗತ ಜಗತ್ತಿನ ಬೆಂಬಲವಿದ್ದು, ಭೂಗತ ಜಗತ್ತನ್ನು ಗುಜರಾತ್‌ನಿಂದ ನಡೆಸಲಾಗುತ್ತಿದೆ ಎಂದು ರಾವತ್ ಗಂಭೀರ ಆರೋಪ ಮಾಡಿದರು.

ಬಾಬಾ ಸಿದ್ದಿಕ್ ಹತ್ಯೆಯ ಹೊಣೆಯನ್ನು ತಂಡವೊಂದು ಹೊತ್ತುಕೊಂಡಿದೆ. ಆದರೆ, ಅವರ ಹತ್ಯೆಗೆ ರಾಜ್ಯದ ಮುಖ್ಯಮಂತ್ರಿಯೇ ಕಾರಣ. ಕಾನೂನು ಸುವ್ಯವಸ್ಥೆ ಬಗ್ಗೆ ಗಮನ ಹರಿಸಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಹೇಳಿದರು.

ಈ ಸರ್ಕಾರದಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಪರಾಧಗಳ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿವೆ. ಅತ್ಯಾಚಾರ, ಕೊಲೆ, ದರೋಡೆ ಪ್ರತಿದಿನ ನಡೆಯುತ್ತಿವೆ. ಕ್ಯಾಬಿನೆಟ್ ಸಭೆಯಲ್ಲಿ ಪ್ರತಿದಿನ ನೂರಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ತೆಗೆದುಕೊಂಡ ನಿರ್ಧಾರಗಳಿಗೆ ಈ ಹಣ ಎಲ್ಲಿಂದ ಬರುತ್ತದೆ? ಇಂದು ರಾಜ್ಯ ಹೊರಗೆ ಅಪಹಾಸ್ಯಕ್ಕೊಳಗಾಗಿದೆ. ಇಂತಹ ಸರ್ಕಾರ ರಾಜ್ಯದ ಜನ ಯಾವತ್ತೂ ಕಂಡಿರಲಿಲ್ಲ. ದೇವೇಂದ್ರ ಫಡ್ನವೀಸ್ ಅವರಂತಹ ಗೃಹ ಸಚಿವರು ಮಹಾರಾಷ್ಟ್ರಕ್ಕೆ ನಾಚಿಕೆಗೇಡು ಎಂದು ಟೀಕಿಸಿದರು.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರು ಬಾಬಾ ಸಿದ್ದಿಕ್ ಅವರನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳೆಂದೂ, ಈಗಾಗಲೇ ಆ ಆರೋಪಿಯನ್ನು ಬಂಧಿಸಿರುವುದಾಗಿಯೂ ಹೇಳುತ್ತಿದ್ದೀರಿ. ಆದರೆ, ಯಾವುದು ನಿಜ ಮತ್ತು ಸುಳ್ಳು ಎಂದು ಗೊತ್ತಾಗುತ್ತಿಲ್ಲ. ಮುಂಬೈನಲ್ಲಿ ಗ್ಯಾಂಗ್ ವಾರ್​ ನಡೆಸಲು ಬಿಡುವುದಿಲ್ಲ ಎಂದು ಶಿಂಧೆ ಈ ಹಿಂದೆ ಹೇಳಿದ್ದರು. ''ಅಕ್ಷಯ್ ಶಿಂಧೆಗೆ (ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ) ಗುಂಡು ಹಾರಿಸಿದ ನಂತರ ಅವರು (ಸಿಎಂ ಶಿಂಧೆ) ''ಸಿಂಗಂ'' ಎಂದು ಘೋಷಿಸಿಕೊಂಡರು. ಈಗ ಈ ''ಸಿಂಗಮ್​​ಗಿರಿ''ಯನ್ನು ಇಲ್ಲಿ ತೋರಿಸಿ. ನಿಮಗೆ ಧೈರ್ಯವಿದ್ದರೆ ಮತ್ತು ನೀವು ಮನುಷ್ಯನಾಗಿದ್ದರೆ ಬಾಬಾ ಸಿದ್ದಿಕ್ ಕೊಲೆ ಪ್ರಕರಣದ ಪಿತೂರಿಗಾರರಿಗೆ ಗುಂಡು ಹಾರಿಸಿ ಎಂದು ಸಿಎಂಗೆ ಸವಾಲೆಸೆದರು.

ಗುಜರಾತ್‌ನ ಎಟಿಎಸ್ ಕಸ್ಟಡಿಯಲ್ಲಿರುವ ವ್ಯಕ್ತಿಯೊಬ್ಬ ಮುಂಬೈನಲ್ಲಿ ನಡೆದ ಕೊಲೆಯ ಹೊಣೆ ಹೊತ್ತಿದ್ದು, ಆ ವ್ಯಕ್ತಿಯೇ ಮುಂಬೈನಲ್ಲಿ ನಡೆದ ಕೊಲೆಯ ಮಾಸ್ಟರ್ ಮೈಂಡ್. ಗುಜರಾತಿನಲ್ಲಿ ಕುಳಿತು ಮುಂಬೈನಲ್ಲಿ ಕಾರ್ಖಾನೆ ನಡೆಸುವುದು, ಮರಾಠಿಗರಿಗೆ ಕಿರುಕುಳ ನೀಡುವುದು, ನಮ್ಮ ಜನರನ್ನು ಕೊಲ್ಲುವುದು, ಇದೆಲ್ಲವೂ ಗುಜರಾತ್‌ನಿಂದ ನಡೆಯುತ್ತಿದೆ. ಗುಜರಾತ್ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ನಮ್ಮ ರಾಜಕೀಯ ನಾಯಕನನ್ನು ಕೊಂದಿದ್ದು. ಗುಜರಾತ್ ಮೂಲದ ಕೇಂದ್ರ ಗೃಹ ಸಚಿವರಿಗೆ ಇದು ಸವಾಲು. ಹತ್ಯೆಯ ಹಿನ್ನೆಲೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಬೇಕು ಎಂದಿದ್ದಾರೆ.

ಆದರೆ, ಅಜಿತ್ ಪವಾರ್​ಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿಭಟನೆ ಬಿಟ್ಟು ಅವರಿಗೆ ಬೇರೆ ದಾರಿ ಇಲ್ಲ. ವಾಸ್ತವವಾಗಿ, ಅಜಿತ್ ಪವಾರ್ ಸಿಎಂ ಅವರ ರಾಜೀನಾಮೆಗೂ ಒತ್ತಾಯಿಸಬೇಕಿತ್ತು. ಆದರೆ, ಅದೇ ಸಂಪುಟದಲ್ಲಿರುವುದರಿಂದ ಅದು ಅಸಾಧ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಹದಗೆಟ್ಟಿದ್ದು, ಗೃಹ ಸಚಿವರಿಗೂ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಜನಸಾಮಾನ್ಯರು ಈಗಲೂ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಮುಂಬೈ ಮತ್ತು ಪುಣೆಯಲ್ಲಿ ಎಲ್ಲಿಂದ ಬುಲೆಟ್ ಬರುತ್ತದೆಯೋ, ಯಾವ ಗ್ಯಾಂಗ್ ದಾಳಿ ಮಾಡುತ್ತದೆಯೋ ಎಂಬ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಸಂಜಯ್ ರಾವತ್ ಹೇಳಿದರು.

ಇದನ್ನೂ ಓದಿ:'ಬಾಬಾ ಸಿದ್ದಿಕಿ ಕೊಂದಿದ್ದು ನಾವೇ': ಹತ್ಯೆ ಹೊಣೆ ಹೊತ್ತ ಲಾರೆನ್ಸ್​​ ಬಿಷ್ಣೋಯಿ ಗ್ಯಾಂಗ್​

ABOUT THE AUTHOR

...view details