ಕೊಕ್ರಜಾರ್ (ಅಸ್ಸೋಂ): ಇತ್ತೀಚಿಗೆ ಜಾತಿ ಪ್ರಮಾಣ ಪತ್ರದ ವಿವಾದಕ್ಕೆ ಸಿಲುಕಿರುವ ಕೊಕ್ರಜಾರ್ ಸಂಸದ ನಬ ಕುಮಾರ್ ಸರನಿಯಾ ಅವರಿಗೆ ಮತ್ತೊಂದು ನಿರಾಶದಾಯಕ ಸುದ್ದಿ ಬಂದಿದೆ. ಮೂರನೇ ಬಾರಿಗೆ ಸಂಸದರಾಗುವ ನಬ ಕುಮಾರ್ ಸರನಿಯಾ ಕನಸು ಭಗ್ನವಾಗಿದೆ. ನಬ ಕುಮಾರ್ ಸರನಿಯಾ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಭಾನುವಾರ ತಿರಸ್ಕರಿಸಿದ್ದಾರೆ.
ಈ ಕುರಿತು ಚುನಾವಣಾಧಿಕಾರಿ ಪ್ರದೀಪ್ ಕುಮಾರ್ ದ್ವಿವೇದಿ ಸುದ್ದಿಗಾರರೊಂದಿಗೆ ಮಾತನಾಡಿ, ಸರನಿಯಾ ಅವರ ನಾಮಪತ್ರಗಳು ಅಮಾನ್ಯವಾಗಿದ್ದರಿಂದ ರದ್ದುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಏಪ್ರಿಲ್ 19ರ ಕೊನೆಯ ದಿನದವರೆಗೆ ಸಲ್ಲಿಕೆಯಾಗಿರುವ 16 ನಾಮಪತ್ರಗಳಲ್ಲಿ 15 ಸಿಂಧುವಾಗಿದ್ದು, ನಾಮಪತ್ರ ಹಿಂಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶವಿದೆ ಎಂದರು.
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕೊಕ್ರಜಾರ್ ಕ್ಷೇತ್ರಕ್ಕೆ ಮೇ 7ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದ್ದು, ಶನಿವಾರ ನಿಗದಿಯಾಗಿದ್ದ ಈ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆಯನ್ನು ಪ್ರಾಧಿಕಾರ ಮುಂದೂಡಿತ್ತು. ಕೊಕ್ರಜಾರ್ ಅಲ್ಲದೆ ಗುವಾಹಟಿ, ಬಾರ್ಪೇಟಾ ಮತ್ತು ಧುಬ್ರಿಯಲ್ಲಿ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಉಳಿದ ಮೂರು ಸ್ಥಾನಗಳಿಗೆ ಶನಿವಾರ ಪರಿಶೀಲನೆ ನಡೆಸಲಾಗಿದ್ದು, ಒಟ್ಟು 37 ನಾಮಪತ್ರಗಳು ಸಿಂಧುವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
2014 ರಿಂದ ಕ್ಷೇತ್ರವನ್ನು ಸ್ವತಂತ್ರವಾಗಿ ಪ್ರತಿನಿಧಿಸುತ್ತಿರುವ ಗಣ ಸುರಕ್ಷಾ ಪಾರ್ಟಿಯ (ಜಿಎಸ್‌ಪಿ) ಮುಖ್ಯಸ್ಥ ಸರನಿಯಾ, ರಾಜ್ಯ ಮಟ್ಟದ ತಮ್ಮ ಎಸ್‌ಟಿ (ಬಯಲು) ಸ್ಥಾನಮಾನವನ್ನು ರದ್ದು ಮಾಡಿದ್ದನ್ನು ಪ್ರಶ್ನಿಸಿ ಗುವಾಹಟಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಪರಿಶೀಲನಾ ಸಮಿತಿ ಅದನ್ನು ಗುರುವಾರ ವಜಾಗೊಳಿಸಿತು. ಇದರ ನಂತರ, ಸಂಸದರು ನವೆಂಬರ್ 18, 1986 ರಂದು ನೀಡಲಾದ ಆಲ್ ಅಸ್ಸೋಂ ಬುಡಕಟ್ಟು ಸಂಘದ ಪ್ರಮಾಣಪತ್ರವನ್ನು ಸಲ್ಲಿಸುವ ಮೂಲಕ ಉಮೇದುವಾರಿಕೆ ಸಲ್ಲಿಸಿದ್ದರು.