ಕರ್ನಾಟಕ

karnataka

ETV Bharat / bharat

ಹೆಗಲ ಮೇಲೆ ಗರ್ಭಿಣಿಯರ ಸಹಿತ 7 ಮಹಿಳೆಯರನ್ನು ಹೊತ್ತು ರಕ್ಷಿಸಿದ 42 ವರ್ಷದ ಆಶಾ ಕಾರ್ಯಕರ್ತೆ - SIBANI MANDAL

ಗುರುವಾರ ರಾತ್ರಿಯಿಂದ ಆರಂಭವಾಗಿರುವ ದಾನಾ ಚಂಡಮಾರುತ ಒಡಿಶಾದಲ್ಲಿ ಅಬ್ಬರಿಸುತ್ತಿದೆ. 8 ಲಕ್ಷ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯದಲ್ಲಿ ಒಬ್ಬರಾದ ಆಶಾ ಕಾರ್ಯಕರ್ತೆ ತನ್ನ ಹೆಗಲ ಮೇಲೆ ಮಹಿಳೆಯರನ್ನು ಹೊತ್ತು ಸಾಗಿ ಪ್ರಾಣ ಉಳಿಸಿದ್ದಾರೆ.

ಹೆಗಲ ಮೇಲೆ ಗರ್ಭಿಣಿಯರ ಸಹಿತ 7 ಮಹಿಳೆಯರನ್ನು ಹೊತ್ತು ರಕ್ಷಿಸಿದ 42 ವರ್ಷದ ಆಶಾ ಕಾರ್ಯಕರ್ತೆ
ಹೆಗಲ ಮೇಲೆ ಗರ್ಭಿಣಿಯರ ಸಹಿತ 7 ಮಹಿಳೆಯರನ್ನು ಹೊತ್ತು ರಕ್ಷಿಸಿದ 42 ವರ್ಷದ ಆಶಾ ಕಾರ್ಯಕರ್ತೆ (ETV Bharat)

By ETV Bharat Karnataka Team

Published : Oct 26, 2024, 11:15 AM IST

ಭುವನೇಶ್ವರ(ಒಡಿಶಾ):ಬಂಗಾಲಕೊಲ್ಲಿಯಲ್ಲಿ ಎದ್ದ "ದಾನಾ" ಚಂಡುಮಾರುತ ಒಡಿಶಾ ಹಾಗೂ ಪಶ್ಚಿಮ ಬಂಗಾಳ ರಾಜ್ಯವನ್ನು ತತ್ತರಗೊಳಿಸಿದೆ. ಮೊದಲೇ ತೆಗೆದುಕೊಂಡಿದ್ದ ಮುನ್ನೆಚ್ಚರಿಕಾ ಕ್ರಮದಿಂದಾಗಿ ಸಾವು - ನೋವು ವರದಿಯಿಲ್ಲದೇ 2 ರಾಜ್ಯವೂ ಚಂಡಮಾರುತದ ವಿರುದ್ಧ ಗೆಲುವು ಸಾಧಿಸಿದೆ. ಈ ಮಧ್ಯೆ ಒಡಿಶಾ ರಾಜ್ಯದಲ್ಲಿ 42 ವರ್ಷದ ಆಶಾ ಕಾರ್ಯಕರ್ತೆ ಮಹಿಳೆಯೊಬ್ಬರು 7 ಮಂದಿಯನ್ನು ತನ್ನ ಹೆಗಲ ಮೇಲೆ ಹೊತ್ತು ರಕ್ಷಿಸಿದ್ದು, ಒಡಿಶಾ ಮುಖ್ಯಮಂತ್ರಿಗಳು ಪ್ರಶಂಸಿದ್ದಾರೆ.

ಸಿನಿಮಾಗಳಲ್ಲಿ ಹೀರೋಗಳು ಸಾಮಾನ್ಯ ಜನರನ್ನು ದೇವರಂತೆ ಬಂದು ರಕ್ಷಿಸುವ ದೃಶ್ಯಗಳನ್ನು ನೋಡಿದ್ದೇವೆ. ಅದು ರೀಲ್​ ಅಷ್ಟೆ. ಆದರೆ, ಒಡಿಶಾದಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ರಕ್ಕಸ ದಾನಾ ಚಂಡಮಾರುತಕ್ಕೆ ಎದೆಯೊಡ್ಡಿ ನಿಲ್ಲಿ ತಮ್ಮ ಹೆಗಲ ಮೇಲೆ ಇಬ್ಬರು ಗರ್ಭಿಣಿಯರನ್ನು ಸೇರಿ 7 ಮಹಿಳೆಯರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.

ಈ ವಂಡರ್​ ವುಮನ್​ ಹೆಸರು'ಸಿಬಾನಿ ಮಂಡಲ್​'.42 ವರ್ಷದ ಇವರು ಕೇಂದ್ರಪಾರ ಜಿಲ್ಲೆಯ ರಾಜನಗರ ಪ್ರದೇಶದಲ್ಲಿ 18 ವರ್ಷದಿಂದ ಆಶಾ ಕಾರ್ಯಕರ್ತೆಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ತುರ್ತು ಸಮಯದಲ್ಲಿ ಸಿಬಾನಿ ಮಂಡಲ್​ ನಿರ್ವಹಿಸಿದ ಶೌರ್ಯ ಕಾರ್ಯಕ್ಕೆ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಸ್ವತಃ ಕರೆ ಮಾಡಿ ಧನ್ಯವಾದ ವ್ಯಕ್ತಪಡಿಸಿದ್ದಾರೆ.

ಸಿಬಾನಿ ಮಂಡಲ್​ಗೆ ನೂತನ ಮನೆಯ ಭರಸವೆ:ಆಶಾ ಕಾರ್ಯಕರ್ತೆ ಮಂಡಲ್​ಗೆ ಸಿಎಂ ಕರೆ ಮಾಡಿ ಮಾತನಾಡಿ, 'ಸಮರ್ಪಿತ ಸೇವೆಯಿಂದ ಸರ್ಕಾರಕ್ಕೆ ಮತ್ತು ವೈಯಕ್ತಿಕವಾಗಿ ನನಗೆ ತುಂಬಾ ಸಂತೋಷವಾಗಿದೆ. ಶ್ರೀ ಜಗನ್ನಾಥ ದೇವರು ನಿಮಗೆ ಸದಾ ಆಶೀರ್ವಾದ ಮಾಡಲಿ' ಎಂದು ಹರಸಿದ್ದಾರೆ. ಈ ವೇಳೆ ಸಿಬಾನಿ ಮಂಡಲ್​ಗೆ ಮನೆ ಇಲ್ಲದಿರುವುದು ತಿಳಿದ ಮೋಹನ್ ಚರಣ್ ಮಾಝಿ ಅವರು ತಕ್ಷಣ ಮನೆ ಹಾಗೂ ಇತರ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

'ದಾನಾ'ದ ಎದುರು ಶೂನ್ಯ ಸಾವುನೋವು ಸಾಧಿಸಿದ ಒಡಿಶಾ: ಚಂಡಮಾರುತದ ಹಾನಿಯ ಕುರಿತು ಸಿಎಂ ನಿನ್ನೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು, "ಇಲ್ಲಿಯವರೆಗೆ ಎಂಟು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ನಿರಂತರ ಮಳೆಯಿಂದಾಗಿ ಅಧಿಕಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೂ ವಿದ್ಯುತ್ ತಂತಿಗಳ ಮರುಸ್ಥಾಪನೆ ನಡೆಯುತ್ತಿದೆ " ಎಂದು ತಿಳಿಸಿದ್ದಾರೆ.

"ಒಡಿಶಾ ಈಗ ಸುರಕ್ಷಿತವಾಗಿದೆ. ನಾವು ಶೂನ್ಯ ಸಾವು - ನೋವುಗಳನ್ನು ಸಾಧಿಸಿದ್ದೇವೆ. ಅನೇಕ ಪರಿಹಾರ ಕೇಂದ್ರಗಳು ಇನ್ನೂ ತೆರೆದಿವೆ. ಈ ಸಂದರ್ಭದಲ್ಲಿ ಯಶಸ್ವಿ ಕಾರ್ಯನಿರ್ವಹಿಸಿದ ರಕ್ಷಣಾ ತಂಡಗಳಿಗೆ, ಅವಿಶ್ರಾಂತವಾಗಿ ದುಡಿಯುತ್ತಿರುವ ಎಲ್ಲರಿಗೂ ನನ್ನ ಧನ್ಯವಾದಗಳು. ಅವರಿನ್ನೂ 48 ಗಂಟೆಗಳ ಕಾಲ ಸೇವೆ ಸಲ್ಲಿಸಬೇಕಾಗಿದೆ. 1.75 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದ್ದು, ಬೂದುಬಳಂಗ ನದಿಯು ಪ್ರವಾಹದಿಂದ ಕೂಡಿದೆ. ಆದರೆ ಅಪಾಯದ ಮಟ್ಟಕ್ಕಿಂತ ಕೆಳಕ್ಕೆ ಹರಿಯುತ್ತಿದೆ. ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಭದ್ರತೆಗಾಗಿ 158 ಪೊಲೀಸ್​ ತುಕಡಿಗಳನ್ನು ನಿಯೋಜಿಸಲಾಗಿದೆ. ಎಲ್ಲಾ ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದು, ಹಾನಿ ವರದಿಗಳನ್ನು ಸಲ್ಲಿಸಲು ನಾವು ಅವರಿಗೆ ಸೂಚಿಸಿದ್ದೇವೆ" ಎಂದು ಹೇಳಿದ್ದಾರೆ.

ಇನ್ನು ಭಾರತೀಯ ಕೋಸ್ಟ್ ಗಾರ್ಡ್ ಮುಂದಿನ ಸವಾಲುಗಳನ್ನು ನಿಭಾಯಿಸಲು ಮತ್ತು ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು 11 ಹಡಗುಗಳು, 5 ವಿಮಾನಗಳು ಮತ್ತು 14 ವಿಪತ್ತು ಪರಿಹಾರ ತಂಡಗಳನ್ನು ಸಜ್ಜುಗೊಳಿಸಿದೆ. 'ನಮ್ಮ ತಂಡಗಳು ಸಮುದಾಯ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಿದ್ಧವಾಗಿವೆ. ಇಲ್ಲಿಯವರೆಗೆ, ಸಮುದ್ರದಲ್ಲಿ ಯಾವುದೇ ಜೀವ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ' ಎಂದು ಎಕ್ಸ್​ ಖಾತೆ ಮೂಲಕ ತಿಳಿಸಿದೆ.

100-110 ಕಿ.ಮೀ ವೇಗದಲ್ಲಿ ಗಾಳಿಯ ಅಬ್ಬರ:ಗುರುವಾರ ರಾತ್ರಿ ಒಡಿಶಾದ ಕರಾವಳಿಯಲ್ಲಿ ದಾನಾ ಚಂಡಮಾರುತ ಅಪ್ಪಳಿಸಿದೆ. ಪ್ರತೀ ಗಂಟೆಗೆ 100 -110 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದೆ.

ಇದನ್ನೂ ಓದಿ:ದಾನಾ ಚಂಡಮಾರುತದ ಅಬ್ಬರ: ಒಡಿಶಾ, ಪಶ್ಚಿಮ ಬಂಗಾಳಕ್ಕೆ ಎನ್​ಡಿಆರ್​ಎಫ್ ಸಿಬ್ಬಂದಿ​, ಪರಿಹಾರ ಸಾಮಗ್ರಿಗಳ ರವಾನೆ

ABOUT THE AUTHOR

...view details