ನವದೆಹಲಿ: 'ದೆಹಲಿ ಮುಖ್ಯಮಂತ್ರಿ, ಪತಿ ಅರವಿಂದ್ ಕೇಜ್ರಿವಾಲ್ ಅವರು ಸಿಂಹ ಇದ್ದಂತೆ. ಅವರನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಪತ್ನಿ ಸುನೀತಾ ಕೇಜ್ರಿವಾಲ್ ಹೇಳಿದರು. ಅರವಿಂದ್ ಕೇಜ್ರಿವಾಲ್ ಅನುಪಸ್ಥಿಯಲ್ಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಪ್ರಚಾರವನ್ನು ಆಮ್ ಆದ್ಮಿ ಪಕ್ಷವು ಶನಿವಾರ ಆರಂಭಿಸಿದ್ದು, ಪಕ್ಷದ ಪೂರ್ವ ದೆಹಲಿಯ ಅಭ್ಯರ್ಥಿ ಕುಲದೀಪ್ ಕುಮಾರ್ ಪರ ಮತಯಾಚನೆ ಮಾಡಿ ಸುನೀತಾ ಕೇಜ್ರಿವಾಲ್ ಮಾತನಾಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಇದು ಅವರ ಚೊಚ್ಚಲ ರೋಡ್ ಶೋ ಆಗಿದ್ದರಿಂದ ವಾಹನದ ಸನ್‌ರೂಫ್ ಮೂಲಕ ನಿಂತ ಸುನೀತಾ ಕೇಜ್ರಿವಾಲ್, ಕೈಜೋಡಿಸಿ ಮತಯಾಚನೆ ಮಾಡಿದ್ದು ಗಮನ ಸೆಳೆಯಿತು. ರೋಡ್ ಶೋ ಉದ್ದಕ್ಕೂ ಬೆಂಬಲಿಗರು 'ಜೈಲ್ ಕಾ ಜವಾಬ್ ಸೇ', 'ವಿ ಮಿಸ್ ಯು ಕೇಜ್ರಿವಾಲ್' ಮತ್ತು 'ಐ ಲವ್ ಕೇಜ್ರಿವಾಲ್' ಎಂಬ ಭಿತ್ತಿಪತ್ರಗಳನ್ನು ಹಿಡಿದಿದ್ದು ಕಂಡುಬಂತು. ಸಾರ್ವಜನಿಕರಲ್ಲಿ ಭಾವನಾತ್ಮಕವಾಗಿ ಮನವಿ ಮಾಡಿದ ಸುನೀತಾ, 'ನಿಮ್ಮ ಮುಖ್ಯಮಂತ್ರಿ, ನನ್ನ ಪತಿಯನ್ನು ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸದಿದ್ದರೂ ಅವರನ್ನು ಬಲವಂತವಾಗಿ ಜೈಲಿಗೆ ಹಾಕಲಾಯಿತು. ಇದು ಸರ್ವಾಧಿಕಾರವಲ್ಲದೇ ಮತ್ತೇನು' ಎಂದು ಪ್ರಶ್ನಿಸಿದರು.
'ಶಾಲೆಗಳನ್ನು ನಿರ್ಮಿಸಿದರು. ಉಚಿತ ವಿದ್ಯುತ್ ಒದಗಿಸಿದರು. ಮೊಹಲ್ಲಾ ಕ್ಲಿನಿಕ್ ಅಂತಹ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನೀಡಿದರು. ಅದಕ್ಕಾಗಿ ದೆಹಲಿ ಮುಖ್ಯಮಂತ್ರಿ ಜೈಲು ಪಾಲಾಗಬೇಕೇ? ಒಂದು ತಿಂಗಳ ಕಾಲ ನಿಮ್ಮ ಸಿಎಂ ಹಾಗೂ ನನ್ನ ಪತಿಯನ್ನು ಬಲವಂತವಾಗಿ ಜೈಲಿಗೆ ಹಾಕಿದ್ದಾರೆ. ಇದುವರೆಗೆ ಯಾವ ನ್ಯಾಯಾಲಯವೂ ಶಿಕ್ಷೆ ನೀಡಿಲ್ಲ. ಕೇವಲ ತನಿಖೆ ನಡೆಸುವುದಾಗಿ ಮಾತ್ರ ಹೇಳುತ್ತಿದ್ದಾರೆ. ಇವರ ಈ ತನಿಖೆ 10 ವರ್ಷಗಳ ಕಾಲ ಹೀಗೆ ಮುಂದುವರಿದರೆ, ನಮ್ಮನ್ನು 10 ವರ್ಷಗಳ ಕಾಲ ಜೈಲಿನಲ್ಲಿ ಇಡಲಾಗುತ್ತದೆ. ತನಿಖೆಯವರೆಗೂ ಜೈಲಿನಲ್ಲೇ ಇರುವಂತೆ ಹೊಸ ವ್ಯವಸ್ಥೆ ರೂಪಿಸಲಾಗಿದೆ. ಅರವಿಂದ್ ಕೇಜ್ರಿವಾಲ್ 22 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದು, 12 ವರ್ಷಗಳಿಂದ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾರೆ. ಇನ್ಸುಲಿನ್ ನೀಡದಿದ್ದರೆ ಮೂತ್ರಪಿಂಡ ಮತ್ತು ಯಕೃತ್ತು ಹಾಳಾಗುತ್ತದೆ. ಅವರನ್ನು ಕೊಲ್ಲಲು ನೀವು ಬಯಸುತ್ತೀರಾ? ದೇಶದಲ್ಲಿ ಆಳುತ್ತಿರುವ ಸರ್ವಾಧಿಕಾರ ತೊಲಗಬೇಕು. ಪ್ರಜಾಪ್ರಭುತ್ವ ಉಳಿಸಬೇಕು. ಅದಕ್ಕಾದರೂ ನಿಮ್ಮ ಮತವನ್ನು ಆಪ್ ಪಕ್ಷಕ್ಕೆ ಹಾಕಬೇಕು' ಎಂದು ಸುನೀತಾ ಕೇಜ್ರಿವಾಲ್ ಹೇಳಿದರು.