ಇಸ್ಲಾಮಾಬಾದ್ (ಪಾಕಿಸ್ತಾನ): ವಿದ್ಯುತ್ ದರ ಇಳಿಕೆ, ಹಿಟ್ಟಿನ ಚೀಲಗಳ ಸಬ್ಸಿಡಿ ಬೆಲೆ ಏರಿಕೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸವಲತ್ತುಗಳ ಮೇಲಿನ ಕಡಿತದ ಬೇಡಿಕೆಗಳ ಮೇಲೆ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿ ಮತ್ತೆ ಹೋರಾಟ ನಡೆದಿದೆ. ಸಾರ್ವಜನಿಕ ಕ್ರಿಯಾ ಸಮಿತಿಯ (ಪಿಎಸಿ) ಸಾವಿರಾರು ಜನರು, ಪಾಕಿಸ್ತಾನ ಸರ್ಕಾರ ಮತ್ತು ಆಜಾದ್ ಜಮ್ಮು ಮತ್ತು ಕಾಶ್ಮೀರದ (ಎಜೆಕೆ) ಶಾಸಕಾಂಗ ಸರ್ಕಾರದ ವಿರುದ್ಧ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಈ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸರ್ಕಾರವು ತಾನು ನೀಡಿರುವ ಭರವಸೆಗಳನ್ನು ಪೂರೈಸಬೇಕು ಎಂದು ಆಗ್ರಹಿಸಿದ ಹಲವಾರು ಪ್ರತಿಭಟನಾಕಾರರು, ಮೆರವಣಿಗೆಯನ್ನು ಪೂಂಚ್ ಪ್ರದೇಶದಿಂದ ಪ್ರಾರಂಭಿಸಿದರು. ಕೋಟ್ಲಿ ಮಾರ್ಗವಾಗಿ ವಿವಿಧ ಪ್ರದೇಶಗಳಲ್ಲಿ ಹಾದು ಹೋದಂತೆ ದೊಡ್ಡದಾಗಿ ಬೆಳೆಯುತ್ತಾ ಸಾಗಿತು. ಜೊತೆಗೆ ದಾರಿ ಮಧ್ಯದಲ್ಲೇ ಅನೇಕ ಜನರು ಮೆರವಣಿಗೆಯಲ್ಲಿ ಸೇರಿಕೊಂಡು ಪಾಕ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಸ್ವಾತಂತ್ರ್ಯದ ಪರ ಘೋಷಣೆಗಳನ್ನು ಕೂಗಿದರು.
"ಕಳೆದ ಬಾರಿ ನಾವು ಪ್ರತಿಭಟಿಸಿದಾಗ ಸರ್ಕಾರವು ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅವರು ವಿದ್ಯುತ್ ದರ ಕಡಿತ ಮಾಡುವುದಾಗಿ ಹೇಳಿ ಭರವಸೆ ನೀಡಿದ್ದರು. ಆದರೆ, ಅದೆಲ್ಲವೂ ಸುಳ್ಳು ಮತ್ತು ವಂಚನೆಯಾಗಿದೆ. ಏಕೆಂದರೆ, ಎಲ್ಲ ಕಾಶ್ಮೀರಿಗಳು ಈ ತಿಂಗಳು ತಮ್ಮ ವಿದ್ಯುತ್‌ನಲ್ಲಿ ಅದೇ ಹೆಚ್ಚಿನ ಯೂನಿಟ್ ದರಗಳೊಂದಿಗೆ ತಮ್ಮ ಬಿಲ್‌ಗಳನ್ನು ಸ್ವೀಕರಿಸಿದ್ದಾರೆ'' ಎಂದು ಪಾಲಂದ್ರಿಯ ಪ್ರತಿಭಟನಾಕಾರರೊಬ್ಬರು ತಮ್ಮ ಅಳಲು ತೋಡಿಕೊಂಡರಲ್ಲದೇ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದರು.