ಜೈಪುರ: ಹಿಂದಿನ ಕಾಂಗ್ರೆಸ್ ಸರ್ಕಾರದ ಮತ್ತೊಂದು ಯೋಜನೆಗೆ ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಮರುನಾಮಕರಣ ಮಾಡಿದ್ದಾರೆ. ರಾಜ್ಯದ ಸರ್ಕಾರಿ ಶಾಲೆಯ 8ನೇ ತರಗತಿವರೆಗಿನ ಮಕ್ಕಳಿಗೆ ನೀಡಲಾಗುತ್ತಿರುವ ಹಾಲಿನ ಪೌಡರ್ ಯೋಜನೆಗೆ ಇದೀಗ 'ಮುಖ್ಯಮಂತ್ರಿಗಳ ಬಾಲ್ ಗೋಪಾಲ್ ಯೋಜನೆ' ಎಂದು ಹೆಸರು ಬದಲಾಯಿಸಲಾಗಿದೆ.
ಮಿಡ್ ಡೇ ಮೀಲ್ (ಮಧ್ಯಾಹ್ನದ ಊಟ) ಯೋಜನೆಯ ಆಯುಕ್ತರಾದ ವಿಶ್ವ ಮೋಹನ್ ಶರ್ಮ ತತ್‌ಕ್ಷಣದಿಂದಲೇ ಬದಲಿ ಹೆಸರು ಜಾರಿಗೆ ಆದೇಶಿಸಿದ್ದಾರೆ. ಯೋಜನೆಗೆ ಸಂಬಂಧಿಸಿದ ಎಲ್ಲಾ ಪತ್ರ ವ್ಯವಹಾರಗಳಲ್ಲಿ ಹೊಸ ಹೆಸರನ್ನು ಬಳಸಲು ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ.
ಇದಕ್ಕೂ ಮುನ್ನ, ಸಿಎಂ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಹಿಂದಿನ ಸರ್ಕಾರದ ಹಲವು ಯೋಜನೆಗಳ ಹೆಸರನ್ನು ಬದಲಾಯಿಸಿತ್ತು. ರಾಜೀವ್ ಗಾಂಧಿ ಸ್ಕಾಲರ್‌ರ್ಶಿಪ್ ಯೋಜನೆಯನ್ನು ಶೈಕ್ಷಣಿಕ ಉತ್ಕೃಷ್ಟ ಯೋಜನೆಗಾಗಿ ವಿವೇಕಾನಂದ ಸ್ಕಾಲರ್ಶಿಪ್ ಎಂದು, ಇಂದಿರಾ ರಸೋಯಿ ಯೋಜನೆಯನ್ನು ಅನ್ನಪೂರ್ಣ ರಸೋಯಿ ಯೋಜನೆ ಎಂದು ಬದಲಾಯಿಸಿದ್ದರು. ಹಾಗೆಯೇ ಮುಖ್ಯಮಂತ್ರಿ ಹಿರಿಯ ನಾಗರಿಕರ ತೀರ್ಥ ಯಾತ್ರಾ ಯೋಜನೆಯನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹಿರಿಯ ನಾಗರಿಕರ ತೀರ್ಥ ಯೋಜನೆ ಎಂಬುದಾಗಿ ಬದಲಾಯಿಸಲಾಗಿತ್ತು.