ಕರ್ನಾಟಕ

karnataka

By ETV Bharat Karnataka Team

Published : Feb 15, 2024, 6:21 PM IST

ETV Bharat / bharat

'ಇಂಡಿಯಾ' ಮೈತ್ರಿಗೆ ಮತ್ತೊಂದು ಹೊಡೆತ: ಏಕಾಂಗಿ ಸ್ಪರ್ಧೆಗಿಳಿದ ಫಾರೂಕ್ ಅಬ್ದುಲ್ಲಾ

ಶ್ರೀನಗರದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಸ್ವಂತ ಬಲದ ಮೇಲೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

Farooq Abdullah
ಫಾರೂಕ್ ಅಬ್ದುಲ್ಲಾ

ಶ್ರೀನಗರ(ಜಮ್ಮು ಕಾಶ್ಮೀರ):"ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ತನ್ನ ಸ್ವಂತ ಬಲದ ಮೇಲೆ ಮುಂಬರುವ ಲೋಕಸಭಾ ಚುನಾವಣೆ ಎದುರಿಸಲಿದೆ" ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಘೋಷಿಸಿದರು. ಐದು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌ ನೇತೃತ್ವದ 'ಇಂಡಿಯಾ' ಮೈತ್ರಿ ಮೂಲಕ ಪ್ರಬಲ ಪೈಪೋಟಿ ನೀಡಲು ಬಯಸಿತ್ತು. ಆದರೆ, ಫಾರೂಕ್ ಹೇಳಿಕೆಯಿಂದ ಲೋಕಸಭೆ ಚುನಾವಣೆಗೂ ಮುನ್ನ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ.

ಸಂಸತ್ ಚುನಾವಣೆಯಲ್ಲಿ ಸೀಟು ಹಂಚಿಕೆಯ ಪ್ರಶ್ನೆಗೆ ಸಂಬಂಧಿಸಿದಂತೆ ಗುರುವಾರ ತಮ್ಮ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಸೀಟು ಹಂಚಿಕೆ ಬಗ್ಗೆ ನಾನು ಈಗಲೇ ಸ್ಪಷ್ಟನೆ ನೀಡುತ್ತೇನೆ. ತಮ್ಮ ಪಕ್ಷವು ಯಾವುದೇ ಮೈತ್ರಿ ಕೂಟದ ಜೊತೆ ದೋಸ್ತಿ ಮಾಡಿಕೊಳ್ಳುವುದಿಲ್ಲ. ಸ್ವಂತ ಬಲದಿಂದಲೇ ಲೋಕಸಭಾ ಚುನಾವಣೆ ಎದುರಿಸಲಿದೆ. ಆ ಶಕ್ತಿ ನ್ಯಾಷನಲ್ ಕಾನ್ಫರೆನ್ಸ್‌ಗಿದೆ. ಇದರಲ್ಲಿ ಎರಡು ಮಾತಿಲ್ಲ. ಮುಂದಿನ ದಿನಗಳಲ್ಲೂ ಇದು ಹೀಗೇ ಮುಂದುವರಿಲಿದೆ" ಎಂದು ಸ್ಪಷ್ಟಪಡಿಸಿದರು. ಎನ್‌ಡಿಎ ಮೈತ್ರಿಕೂಟಕ್ಕೆ ಮತ್ತೆ ಸೇರ್ಪಡೆ ಆಗಬಹುದೇ ಎಂಬ ಪ್ರಶ್ನೆಗೆ "ಮೈತ್ರಿ ಬಗ್ಗೆ ಸದ್ಯಕ್ಕೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಬೇಡಿ" ಎಂದರು.

ಐದು ಲೋಕಸಭಾ ಕ್ಷೇತ್ರಗಳಿಗೆ ಮೈತ್ರಿ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಕಾಂಗ್ರೆಸ್​​ ನಡುವೆ ಸೀಟು ಹಂಚಿಕೆಯಲ್ಲಿ ಈ ಹಿಂದೆಯೂ ಒಡಕು ಮೂಡಿತ್ತು. ಕಾಂಗ್ರೆಸ್ ಮತ್ತು ಪಿಡಿಪಿ ಚುನಾವಣೆಗೆ ಸ್ಪರ್ಧಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದವು. ಆದರೆ, ನ್ಯಾಷನಲ್ ಕಾನ್ಫರೆನ್ಸ್ ಎರಡು ಸ್ಥಾನಗಳಲ್ಲಿ ಮಾತ್ರ ಮೈತ್ರಿ ಮಾಡಿಕೊಳ್ಳಲು ಬಯಸಿತ್ತು. ಪಕ್ಷದ ಪರವಾಗಿ ಒಮರ್ ಅಬ್ದುಲ್ಲಾ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಈ ಬಗ್ಗೆ ಸ್ಪಷ್ಟಪಡಿಸಿದ್ದರು. ಅಲ್ಲದೇ ಮೈತ್ರಿಕೂಟದೊಳಗಿನ ಆಂತರಿಕ ಭಿನ್ನಾಪ್ರಾಯದ ಬಗ್ಗೆಯೂ ಪ್ರಶ್ನಿಸಿದ್ದರು.

ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಯನ್ನು ಸೋಲಿಸುವ ಸಲುವಾಗಿ ನ್ಯಾಷನಲ್ ಕಾನ್ಫರೆನ್ಸ್​ನ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಇಂಡಿಯಾ ಮೈತ್ರಿ ಸೇರ್ಪಡೆಯಾಗಿದ್ದರು. ಈವರೆಗೆ ನಡೆದ ಮೈತ್ರಿಕೂಟದ ಎಲ್ಲಾ ಸಭೆಗಳಲ್ಲಿಯೂ ಅವರು ಭಾಗಿಯಾಗಿದ್ದರು. ಆದರೆ ಒಮ್ಮತ ಮೂಡದೇ ಇದ್ದುದರಿಂದ ಒಳಗೊಳಗೇ ಅಸಮಾಧಾನವಿತ್ತು.

ಮತ್ತೊಂದೆಡೆ ಜಮ್ಮು, ಅನಂತನಾಗ್-ರಾಜೌರಿ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ. ಇತ್ತೀಚೆಗಷ್ಟೇ ಎಎಪಿ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್, ಆರ್‌ಜೆಡಿ ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೈತ್ರಿಕೂಟಕ್ಕೆ ವಿದಾಯ ಹೇಳಿದ್ದರು.

ಇದನ್ನೂ ಓದಿ:ಲೋಕಸಭೆಗೆ ಸ್ಪರ್ಧಿಸದ ಸೋನಿಯಾ: ರಾಯ್‌ಬರೇಲಿ ಮತದಾರರಿಗೆ ಭಾವನಾತ್ಮಕ ಪತ್ರ

ABOUT THE AUTHOR

...view details