ಚೆನ್ನೈ (ತಮಿಳುನಾಡು):ಇಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಂಕಾಲಾಜಿಸ್ಟ್ ವೈದ್ಯನಿಗೆ ರೋಗಿಯ ಮಗ ಚಾಕುವಿನಿಂದ ಇರಿದ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ವೈದ್ಯರ ಮೇಲೆ ರೋಗಿ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಚೆನ್ನೈನ ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಯ ಡಾ ಹರಿಹರನ್ ಹಲ್ಲೆಗೆ ಒಳಗಾದ ವೈದ್ಯರಾಗಿದ್ದಾರೆ.
ಸರ್ಕಾರಿ ಸ್ವಾಮ್ಯದ ಸ್ಟಾನ್ಲಿ ವೈದ್ಯಕೀಯ ಕಾಲೇಜಿನ ಸೈಕಾಲಜಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ ಹರಿಹರನ್ ಮೇಲೆ ಬುಧವಾರ ಬೆಳಗ್ಗೆ ಒಪಿಡಿಯಲ್ಲಿ ರೋಗಿ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಇದರಿಂದ ವೈದ್ಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ತಕ್ಷಣಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ವೈದ್ಯರ ಮೇಲಿನ ಹಲ್ಲೆ ಸಂಬಂಧ ಆಸ್ಪತ್ರೆಯ ಅಧಿಕಾರಿಗಳು ನೀಡಿದ ದೂರಿನ ಅನ್ವಯ ನೀಲಂಕರೈ ಮೂಲದ ಆರೋಪಿ ಭರತ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಕಳೆದ ಕೆಲವು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಒಂದೇ ದಿನದಲ್ಲಿ ಚೆನ್ನೈನಲ್ಲಿ ಇಬ್ಬರು ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲೆ ನಡೆದಿರುವ ಹಲ್ಲೆ ಘಟನೆ ವಿರುದ್ಧ ಇದೀಗ ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿದೆ. ಉದ್ಯೋಗ ಸ್ಥಳದಲ್ಲಿ ರಕ್ಷಣೆಗೆ ಆಗ್ರಹಿಸಿ ಕಿರಿಯ ವೈದ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಪ್ರತಿಭಟನಾನಿರತ ವೈದ್ಯರ ಪರವಾಗಿ ಮಾತನಾಡಿರುವ ವೈದ್ಯಕೀಯ ವಿದ್ಯಾರ್ಥಿ ಆರತಿ, 'ವೈದ್ಯರನ್ನು ನೀವು ದೇವರು ಎಂದು ಭಾವಿಸಬೇಡಿ. ನಿಮ್ಮಂತೆಯೇ ಅವರು ಮನುಷ್ಯರು ಎಂದು ತಿಳಿಯಿರಿ. ವೈದ್ಯರ ಮೇಲಿನ ಈ ದಾಳಿಗಳು ನಮ್ಮೆಲ್ಲರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ. ನಾವು ಇಲ್ಲಿರುವುದು ಜನರ ಸೇವೆಗೆ. ಆದರೆ, ಇದೀಗ ಯಾರು, ಯಾವಾಗ ಹಲ್ಲೆ ಮಾಡುತ್ತಾರೆ ಎಂಬುದು ತಿಳಿಯದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ದಾಳಿಗಳಿಂದ ನಮ್ಮಲ್ಲಿ ಬಹುತೇಕರು ವೈದ್ಯಕೀಯ ಅಧ್ಯಯನಕ್ಕೆ ವಿದೇಶಕ್ಕೆ ಹೋಗುವುದರ ಕುರಿತು ಯೋಚಿಸುತ್ತಿದ್ದೇವೆ' ಎಂದರು.
ಭಾರತೀಯ ವೈದ್ಯಕೀಯ ಅಸೋಸಿಯೇಷನ್ (ಐಎಂಎ) ಕೂಡ ಈ ಘಟನೆಯನ್ನು ಖಂಡಿಸಿದ್ದು, ವೈದ್ಯಕೀಯ ವೃತ್ತಿಪರರಿಗೆ ಸುರಕ್ಷತೆ ಕೊರತೆ ಇರುವುದರ ಸಂಬಂಧ ಆಘಾತ ವ್ಯಕ್ತಪಡಿಸಿದೆ.
ಕಲೈನರ್ ಕರುಣಾನಿಧಿ ಜನರಲ್ ಆಸ್ಪತ್ರೆ ವೈದ್ಯರ ಮೇಲೆ ದಾಳಿ: ಇಲ್ಲಿನ ಕಲೈನರ್ ಕರುಣಾನಿಧಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಯ ಮಗನೊಬ್ಬ ವೈದ್ಯನಿಗೆ 7 ಬಾರಿ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡ ಡಾ ಬಾಲಾಜಿ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರ ಕಾಳಜಿ ಬಗ್ಗೆ ಎದುರಾದ ಆತಂಕ: ರಾಜ್ಯ ರಾಜಧಾನಿಯಲ್ಲಿ ದಾಖಲಾದ ಈ ಪುನರಾವರ್ತಿತ ದಾಳಿಗಳು ಇದೀಗ ವೈದ್ಯಕೀಯ ವೃತ್ತಿಪರರಲ್ಲಿ ಆತಂಕ ಮೂಡಿಸಿದೆ. ಮೆಡಿಕಲ್ ಅಸೋಸಿಯೇಷನ್ ಮತ್ತು ತಮಿಳುನಾಡು ವೈದ್ಯಕೀಯ ಮಂಡಳಿ ಈ ಹಿಂಸಾಚಾರದ ವರ್ತನೆ ಖಂಡಿಸಿದ್ದು, ಸರ್ಕಾರಿ ವೈದ್ಯರ ಸುರಕ್ಷತೆಗೆ ಕ್ರಮಕ್ಕೆ ಮುಂದಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದೆ.
ಇದನ್ನೂ ಓದಿ:ಚಿಕಿತ್ಸೆ ವಿಚಾರವಾಗಿ ವಾಗ್ವಾದ: ವೈದ್ಯನಿಗೆ ಏಳು ಬಾರಿ ಚಾಕುವಿನಿಂದ ಇರಿದ ರೋಗಿಯ ಮಗ!