ಚೆನ್ನೈ (ತಮಿಳುನಾಡು):ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡು ಬಿಜೆಪಿಗೆ ಈವರೆಗೂ ಎಟುಕದ ನಕ್ಷತ್ರವಾಗಿದೆ. 2019 ರ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದ್ದ ಕೇಸರಿ ಪಕ್ಷಕ್ಕೆ, ಈ ಬಾರಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಎಂಬ ಹೊಸ ಪ್ರಖರ ಅಸ್ತ್ರವೊಂದು ದೊರಕಿದೆ. ಎಐಎಡಿಎಂಕೆ ಜೊತೆ ಮೈತ್ರಿ ಮುರಿದುಕೊಂಡಿದ್ದು, ಬಿಜೆಪಿ ಏಕಾಂಗಿಯಾಗಿ ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿದೆ.
ಇತ್ತ ಆಡಳಿತಾರೂಢ ಡಿಎಂಕೆ, ಕಾಂಗ್ರೆಸ್, ಮುಸ್ಲಿಂ ಲೀಗ್ ಸೇರಿ ಇನ್ನಿತರ ಪಕ್ಷಗಳು ಇಂಡಿಯಾ ಕೂಟದ ಭಾಗವಾಗಿ ಸೀಟು ಹಂಚಿಕೆ ಮಾಡಿಕೊಂಡಿವೆ. ಎನ್ಡಿಎ ಭಾಗವಾಗಿದ್ದ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಕಡಿದುಕೊಂಡು ಏಕಾಂಗಿಯಾಗಿವೆ. ಮಾಜಿ ಸಿಎಂ ಜಯಲಲಿತಾ ಬಳಿಕ ಎಐಎಡಿಎಂಕೆ ಪಕ್ಷದ ಚುಕ್ಕಾಣಿ ಹಿಡಿದಿರುವ ಎಡಪ್ಪಾಡಿ ಪಳನಿಸ್ವಾಮಿ ಬಿಜೆಪಿ ವಿರುದ್ಧ ನೇರವಾಗಿ ಟೀಕಿಸುತ್ತಿದ್ದಾರೆ.
ಅಣ್ಣಾಮಲೈ V/S ಪಳನಿಸ್ವಾಮಿ:ಐಪಿಎಸ್ ಅಧಿಕಾರಿಯಾಗಿದ್ದ ಕೆ.ಅಣ್ಣಾಮಲೈ ಅವರು 2020 ರಲ್ಲಿ ಬಿಜೆಪಿ ಸೇರಿದರು. ಬಳಿಕ ಪಕ್ಷದ ಉಪಾಧ್ಯಕ್ಷರಾಗಿದ್ದರು. 2021 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಅವರೂ ಸೋಲುವ ಮೂಲಕ ಪಕ್ಷ ಕೂಡ ಹೀನಾಯ ಸೋಲು ಅನುಭವಿಸಿತ್ತು. ಇದಾದ ಬಳಿಕ ಅವರು ಪಕ್ಷದ ಅಧ್ಯಕ್ಷ ಹುದ್ದೆಗೇರಿದರು. ತದನಂತರ ಅದ್ಭುತವಾಗಿ ಪಕ್ಷ ಸಂಘಟನೆ ಮಾಡುತ್ತಿರುವ ಮಾಜಿ ಪೊಲೀಸ್ ಅಧಿಕಾರಿ ಈ ಬಾರಿ ಕಮಾಲ್ ಮಾಡುತ್ತಾರಾ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ.
ಎಐಎಡಿಎಂಕೆ ಪಕ್ಷ ಪಳನಿಸ್ವಾಮಿ ಮತ್ತು ಪನ್ನೀರ್ಸೆಲ್ವಂ ನಾಯಕತ್ವದಲ್ಲಿ ಎರಡು ಬಣಗಳಾಗಿ ಇಬ್ಭಾಗವಾಗಿವೆ. ಪಕ್ಷದಿಂದ ಮುನಿಸಿಕೊಂಡಿರುವ ಪನ್ವೀರ್ಸೆಲ್ವಂ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಸಂಘಟನೆಯ ಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಅಣ್ಣಾಮಲೈ 'ನನ್ನ ಮಣ್ಣು ನನ್ನ ಜನ' (ಎನ್ ಮಣ್ ಎನ್ ಮಕ್ಕಳ್) ಹೆಸರಿನಲ್ಲಿ ರಾಜ್ಯಾದ್ಯಂತ ಯಾತ್ರೆ ನಡೆಸಿದ್ದರು. ಇದು ತಮಿಳು ಜನರ ಗಮನ ಸೆಳೆದಿದೆ.