ಹೈದರಾಬಾದ್: ಎರಡನೇ ಹಂತದ ಲೋಕಸಭೆ ಚುನಾವಣೆಗೆ ಮುನ್ನ, ಭಾರತದ ಆಂತರಿಕ ವಿಷಯಗಳಲ್ಲಿ ಪಾಶ್ಚಿಮಾತ್ಯ ಮಾಧ್ಯಮಗಳ ಹಸ್ತಕ್ಷೇಪದ ಕುರಿತು ಭಾರತವು ಖಾರವಾಗಿಯೇ ಟೀಕಿಸಿದೆ. ಮಂಗಳವಾರ ಹೈದರಾಬಾದ್‌ನಲ್ಲಿ ರಾಷ್ಟ್ರೀಯವಾದಿ ಚಿಂತಕರ ವೇದಿಕೆ ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, ಪಾಶ್ಚಿಮಾತ್ಯ ಮಾಧ್ಯಮಗಳ ಟೀಕೆಗಳ ವಿರುದ್ಧ ಗರಂ ಆಗಿದ್ದಾರೆ.
''ನಮ್ಮ ಲೋಕಸಭಾ ಚುನಾವಣೆ ಕುರಿತು ಪಾಶ್ಚಿಮಾತ್ಯ ಮಾಧ್ಯಮಗಳು ಮನಬಂದಂತೆ ಟೀಕೆ ಮಾಡುತ್ತಿವೆ. ಅವರು ನಮ್ಮ ಪ್ರಜಾಪ್ರಭುತ್ವವನ್ನು ಟೀಕಿಸಿರುವುದು ಮಾಹಿತಿಯ ಕೊರತೆಯಿಂದಲ್ಲ. ಏಕೆಂದರೆ, ಅವರು ಈ ಚುನಾವಣೆಯಲ್ಲಿ ತಮ್ಮನ್ನು ''ರಾಜಕೀಯ ಆಟಗಾರರು" ಅಂತ ಭಾವಿಸಿದ್ದಾರೆ ಎಂದು ಜೈಶಂಕರ್ ಹೇಳಿದರು.
''ಭಾರತದ ಚುನಾವಣೆ ಕುರಿತು ಪಾಶ್ಚಿಮಾತ್ಯ ಮಾಧ್ಯಮಗಳು ಮಾಡಿದ ಟೀಕೆಗಳು ಮತ್ತು ವರದಿಗಳ ವಿರುದ್ಧ ನಿಲ್ಲುವ ಅಗತ್ಯವಿದೆ. ಈ ಪರಿಸ್ಥಿತಿಯಲ್ಲಿ ನಾವು ಆತ್ಮವಿಶ್ವಾಸದ ಮಾರ್ಗದಿಂದ ಟೀಕೆಗಳನ್ನು ಎದುರಿಸಿ ನಿಲ್ಲಬೇಕಾಗುತ್ತದೆ. ಇಲ್ಲದಿದ್ದರೆ, ಅವರು ನಮ್ಮ ದೇಶದಲ್ಲಿನ ಎಲ್ಲ ವಿಚಾರಗಳನ್ನು ಪ್ರಶ್ನಿಸುತ್ತಾರೆ. ಅವರು ನಮ್ಮ ಚುನಾವಣಾ ವ್ಯವಸ್ಥೆ, ನಮ್ಮ ಇವಿಎಂ, ನಮ್ಮ ಚುನಾವಣಾ ಆಯೋಗ, ಹವಾಮಾನವನ್ನು ಸಹ ಪ್ರಶ್ನಿಸುತ್ತಾರೆ'' ಎಂದು ಕಿಡಿಕಾರಿದ್ದಾರೆ.
''ನಾವು ಕಳೆದ ಹತ್ತು ವರ್ಷಗಳಿಂದ ಏನು ನೀಡಿದ್ದೇವೆ ಎಂಬುದರ ಆಧಾರದ ಮೇಲೆ ವಿಶ್ವಾಸದ ಅಭಿವ್ಯಕ್ತಿ ಸ್ಪಷ್ಟವಾಗಿದೆ. ಒಂದು ರೀತಿಯಲ್ಲಿ, ಇಂದು ನಾವು ಬಹಳ ಮುಖ್ಯವಾದ ಬದಲಾವಣೆಯ ಹಂತದಲ್ಲಿದ್ದೇವೆ. ಸರ್ಕಾರ ತೆಗೆದುಕೊಳ್ಳಲಿರುವ ನಿರ್ಧಾರಗಳು ಮುಂದಿನ ಐದು ವರ್ಷಗಳಿಗೆ ಮಾತ್ರವಲ್ಲ, ಬದಲಿಗೆ ನಮ್ಮ ದೇಶ, ನಮ್ಮ ಸಮಾಜ ಮತ್ತು ನಮ್ಮ ಮುಂದಿನ ಪೀಳಿಗೆಗೆ ದೊಡ್ಡ ವಿಶ್ವಾಸ ನೀಡುತ್ತದೆ. ಅದುವೇ ಗ್ಯಾರಂಟಿ ವಿಶ್ವಾಸದ ಅಭಿವ್ಯಕ್ತಿಯಾಗಿದೆ'' ಎಂದು ಜೈಶಂಕರ್ ತಿಳಿಸಿದರು. ಕಳೆದ ಹತ್ತು ವರ್ಷಗಳಲ್ಲಿ ಭಾರತವನ್ನು ವಿಶ್ವದಾದ್ಯಂತ ಹೇಗೆ ಪರಿಗಣಿಸಲಾಗಿದೆ. ಮುಂದಿನ 25 ವರ್ಷಗಳಲ್ಲಿ ದೇಶವು ಹೇಗೆ ತಯಾರಿ ನಡೆಸುತ್ತಿದೆ ಎಂಬುದು ಇಂದು ನಾವು ಜಗತ್ತಿಗೆ ಎತ್ತಿ ತೋರಿಸಬೇಕಿದೆ'' ಎಂದರು.
ಜಾಗತಿಕ ಮಾಧ್ಯಮಗಳು ಭಾರತದ ಬಗ್ಗೆ ಏನು ಹೇಳುತ್ತವೆ?:ನರೇಂದ್ರ ಮೋದಿ ಆಡಳಿತದಲ್ಲಿ ಕೆಲವು ಜಾಗತಿಕ ಮಾಧ್ಯಮಗಳು ಸುದ್ದಿಗಳನ್ನು ಪ್ರಸ್ತುತಪಡಿಸುವುದನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಪಾಶ್ಚಿಮಾತ್ಯ ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಕಳೆದ 10 ವರ್ಷಗಳ ಅವಧಿಯಲ್ಲಿ ಭಾರಿ ಜನಾದೇಶವನ್ನು ಪಡೆದ ಎನ್‌ಡಿಎ ಸರ್ಕಾರದ ವಿರುದ್ಧ ದೂರದೃಷ್ಟಿಯಿಲ್ಲದ ಟೀಕೆಗಳನ್ನು ಮಾಡಿವೆ ಎಂದು ಭಾರತ ಹೇಳಿದೆ.