ಲೇಹ್ (ಲಡಾಖ್):ಸಾಹಸಮಯ ಬೈಕ್ ರೈಡಿಂಗ್ಗೆ ಹೆಸರುವಾಸಿಯಾದ ಕೇಂದ್ರಾಡಳಿತ ಪ್ರದೇಶ ಲಡಾಖ್ಗೆ 'ರಾಜ್ಯ ಸ್ಥಾನಮಾನ' ನೀಡುವಂತೆ ಆಗ್ರಹಿಸಿ ಹೋರಾಟ ಆರಂಭವಾಗಿದೆ. ಜೊತೆಗೆ ಸಂವಿಧಾನದ 6ನೇ ಪರಿಚ್ಛೇದದ ಅಡಿ ವಿಶೇಷ ರಕ್ಷಣೆ ನೀಡಬೇಕು ಎಂಬ ಕೂಗು ಎದ್ದಿದೆ.
ಕೊರೆಯುವ ಚಳಿಯ ನಡುವೆ ಭಾನುವಾರ ಸಾವಿರಾರು ಜನರು ಲಡಾಖ್‌ನ ಪ್ರಮುಖ ನಗರವಾದ ಲೇಹ್ನಲ್ಲಿ ಮೆರವಣಿಗೆ ನಡೆಸಿದರು. ಲೆಹ್ ಅಪೆಕ್ಸ್ ಬಾಡಿ (ಎಲ್ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಇದರ ನೇತೃತ್ವ ವಹಿಸಿದ್ದವು. ಕೇಂದ್ರಾಡಳಿತ ಪ್ರದೇಶವನ್ನು ತೆರವು ಮಾಡಿ, ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡಬೇಕು. ಇಲ್ಲಿನ ಬುಡಕಟ್ಟು ಜನಾಂಗದ ವಿಶಿಷ್ಟ ಸಂಸ್ಕೃತಿಯನ್ನು ರಕ್ಷಿಸಲು ಸಾಂವಿಧಾನಿಕ ರಕ್ಷಣೆ ಘೋಷಿಸಬೇಕು ಎಂದು ಆಗ್ರಹಿಸಲಾಯಿತು.
ಗಮನಾರ್ಹ ಸಂಗತಿಯೆಂದರೆ, ಲಡಾಖ್‌ನ ವಿಶಿಷ್ಟ ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸಲು ಕೇಂದ್ರ ಸರ್ಕಾರವು ಈಗಾಗಲೇ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಇದರ ನಡುವೆ ಜನರಿಂದ ಪ್ರತಿಭಟನಾ ಮೆರವಣಿಗೆ ನಡೆದಿದೆ.
ಪ್ರತ್ಯೇಕ ರಾಜ್ಯ, ವಿಧಾನಸಭೆ ಬೇಕು:ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ ಅನ್ನು ಜಮ್ಮು ಕಾಶ್ಮೀರದಿಂದ ಸಂಪೂರ್ಣವಾಗಿ ಪ್ರತ್ಯೇಕ ಮಾಡಬೇಕು. ಇಲ್ಲಿನ ಜನರಿಗಾಗಿಯೇ ವಿಧಾನಸಭೆ, ವಿಧಾನಪರಿಷತ್ತು ರಚಿಸಬೇಕು. ಜನ ಕೇಂದ್ರಿತ ಆಡಳಿತವನ್ನು ಜಾರಿಗೆ ತರಬೇಕು ಎಂದು ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್‌ನ ಕಾನೂನು ಸಲಹೆಗಾರ ಹಾಜಿ ಗುಲಾಮ್ ಮುಸ್ತಫಾ ಹಕ್ಕು ಪ್ರತಿಪಾದಿಸಿದರು.