ಹೈದರಾಬಾದ್:ಪ್ರಬಲ ಪೈಪೋಟಿ ನೀಡಿದ್ದ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಜನವರಿ 20 ರಂದು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದರ ನಡುವೆ, ತೆಲಂಗಾಣದಲ್ಲಿ ಟ್ರಂಪ್ಗಾಗಿಯೇ ಅಭಿಮಾನಿಯೊಬ್ಬರು ದೇವಸ್ಥಾನ ಕಟ್ಟಿಸಿದ್ದಾರೆ ಎಂಬುದು ಮುನ್ನೆಲೆಗೆ ಬಂದಿದೆ.
ವಾರಂಗಲ್ ಜಿಲ್ಲೆಯಲ್ಲಿ ಡೊನಾಲ್ಡ್ ಟ್ರಂಪ್ರ ದೇವಸ್ಥಾನವಿದೆ. ಜನಗಾಮ ಜಿಲ್ಲೆಯ ಬಚ್ಚನ್ನಪೇಟೆ ಮಂಡಲದ ಕೊನ್ನೆ ಗ್ರಾಮದ ಬುಸ್ಸಾ ರಾಮುಲು ಮತ್ತು ಸಾವಿತ್ರಿ ದಂಪತಿಯ ಪುತ್ರ ಕೃಷ್ಣ ಅವರು ಈ ದೇವಸ್ಥಾನದ ರೂವಾರಿ. ಕೃಷ್ಣ ಟ್ರಂಪ್ರ ಕಟ್ಟಾ ಅಭಿಮಾನಿ. ಹೀಗಾಗಿ, ಅವರ ವಿಗ್ರಹವನ್ನು ಕೆತ್ತಿಸಿ, ಗುಡಿಯನ್ನೇ ನಿರ್ಮಿಸಿದ್ದಾರೆ.
ಅಭಿಮಾನಿಯ ಭೇಟಿಗೆ ಒಪ್ಪಿದ್ದ ಟ್ರಂಪ್:ವೀರಾಭಿಮಾನಿ ಕೃಷ್ಣ ಅವರು ಡೊನಾಲ್ಡ್ ಟ್ರಂಪ್ರನ್ನು ಮುಖತಃ ಭೇಟಿ ಮಾಡುವ ಇಚ್ಚೆ ಹೊಂದಿದ್ದರು. 2019 ರಲ್ಲಿ ಈ ಲಕ್ ಕುದುರಿತ್ತು. ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, "ನಾನು ನಿಮ್ಮ ಅಭಿಮಾನಿ. ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ" ಎಂದು ಕೃಷ್ಣ ಬರೆದುಕೊಂಡು ಟ್ರಂಪ್ಗೆ ಟ್ಯಾಗ್ ಮಾಡಿದ್ದರು. ಇದಕ್ಕೆ ಮಾಜಿ ಅಧ್ಯಕ್ಷ ಪ್ರತಿಕ್ರಿಯಿಸಿ, ‘ಓಕೆ’ ಎಂದು ರೀಟ್ವೀಟ್ ಮಾಡಿದ್ದರು. ಇದು ಕೃಷ್ಣ ಅವರ ಸಂತೋಷಕ್ಕೆ ಪಾರವೇ ಇಲ್ಲದಾಗಿತ್ತು.
ಬಳಿಕ ಅಭಿಮಾನದ ಪರಾಕಾಷ್ಟೆಯಿಂದಾಗಿ ಕೃಷ್ಣ ಅವರು, 2020ರ ಫೆಬ್ರವರಿಯಲ್ಲಿ ಟ್ರಂಪ್ಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ. ಅದರಲ್ಲಿ ಟ್ರಂಪ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ನೀಲಿ ಸೂಟ್ ಧರಿಸಿ, ಥಂಬ್ಸ್ ಅಪ್ ತೋರಿಸಿದ ನಿಂತ ಭಂಗಿಯಲ್ಲಿ ವಿಗ್ರಹವಿದೆ. 2020 ರಲ್ಲಿ ಟ್ರಂಪ್ ಎರಡನೇ ಬಾರಿ ಚುನಾವಣೆಯಲ್ಲಿ ಸೋತ ನಂತರ, ಕೃಷ್ಣ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಬಳಿಕ ಅವರು, ಅಕ್ಟೋಬರ್ 11, 2020 ರಂದು ಹೃದಯಾಘಾತದಿಂದ ನಿಧನರಾದರು.