ಕರ್ನಾಟಕ

karnataka

ETV Bharat / bharat

ಫೋರ್ಬ್ಸ್ 100 ಶ್ರೀಮಂತ ಭಾರತೀಯರ ಪಟ್ಟಿ: ಅಂಬಾನಿ ನಂ.1, 2ನೇ ಸ್ಥಾನದಲ್ಲಿ ಅದಾನಿ

ಭಾರತದ 100 ಶ್ರೀಮಂತ ಉದ್ಯಮಿಗಳ ಒಟ್ಟು ಸಂಪತ್ತು ಮೊದಲ ಬಾರಿಗೆ ಟ್ರಿಲಿಯನ್ ಡಾಲರ್ ಮೈಲಿಗಲ್ಲನ್ನು ದಾಟಿದೆ.

By ETV Bharat Karnataka Team

Published : 8 hours ago

ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ (IANS)

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ 2024 ರ ಫೋರ್ಬ್ಸ್ 100 ಶ್ರೀಮಂತ ಭಾರತೀಯ ಉದ್ಯಮಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಭಾರತದ 100 ಶ್ರೀಮಂತ ಉದ್ಯಮಿಗಳ ಒಟ್ಟು ಸಂಪತ್ತು ಮೊದಲ ಬಾರಿಗೆ ಟ್ರಿಲಿಯನ್ ಡಾಲರ್ ಮೈಲಿಗಲ್ಲು ದಾಟಿದ್ದು, ದೇಶದ ಶೇಕಡಾ 80 ಕ್ಕೂ ಹೆಚ್ಚು ಶ್ರೀಮಂತ ಉದ್ಯಮಿಗಳು ಒಂದು ವರ್ಷದ ಹಿಂದೆ ಇದ್ದಕ್ಕಿಂತ ಈಗ ಮತ್ತಷ್ಟು ಹೆಚ್ಚು ಶ್ರೀಮಂತರಾಗಿದ್ದಾರೆ ಎಂದು ಫೋರ್ಬ್ಸ್ ವರದಿ ಗುರುವಾರ ತೋರಿಸಿದೆ.

1.1 ಟ್ರಿಲಿಯನ್​​​​​ ಡಾಲರ್​ ದಾಟಿದ ಅಂಬಾನಿ - ಅದಾನಿ:ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಭಾರತದ ಅಗ್ರ 100 ಶತಕೋಟ್ಯಾಧಿಪತಿಗಳ ಪಟ್ಟಿಯ ಪ್ರಕಾರ, ಭಾರತದ ಅತ್ಯಂತ ಶ್ರೀಮಂತರ ಶ್ರೀಮಂತಿಕೆಯ ಮೌಲ್ಯ ಈಗ 1.1 ಟ್ರಿಲಿಯನ್ ಡಾಲರ್ ದಾಟಿದೆ.

"ಮೂಲಸೌಕರ್ಯ ಉದ್ಯಮಿ ಗೌತಮ್ ಅದಾನಿ ಅತಿ ಹೆಚ್ಚು ಸಂಪತ್ತು ಗಳಿಸಿದ್ದಾರೆ. ಕಳೆದ ವರ್ಷ ಅವರ ಕಂಪನಿಯ ವಿರುದ್ಧ ಕೇಳಿ ಬಂದಿದ್ದ ಶಾರ್ಟ್​ ಸೆಲ್ಲಿಂಗ್ ಆರೋಪದ ನಂತರ ಅವರು ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಪುತ್ರರು ಮತ್ತು ಸೋದರಳಿಯರನ್ನು ಪ್ರಮುಖ ಸ್ಥಾನಗಳಿಗೆ ಅವರು ನೇಮಿಸಿದ್ದಾರೆ" ಎಂದು ವರದಿ ತಿಳಿಸಿದೆ.

116 ಬಿಲಿಯನ್​​ ಡಾಲರ್​ಗೆ ಆದಾಯ ಹೆಚ್ಚಿಸಿಕೊಂಡ ಅದಾನಿ:"ಸಹೋದರ ವಿನೋದ್ ಅದಾನಿ ಅವರೊಂದಿಗೆ, ಗೌತಮ್ ಅದಾನಿ ಅವರು ಹೆಚ್ಚುವರಿಯಾಗಿ 48 ಬಿಲಿಯನ್ ಡಾಲರ್ ಸಂಪತ್ತನ್ನು ಗಳಿಸಿದ್ದು, ಕುಟುಂಬದ ನಿವ್ವಳ ಮೌಲ್ಯವನ್ನು 116 ಬಿಲಿಯನ್ ಡಾಲರ್​ಗೆ ಹೆಚ್ಚಿಸಿದ್ದಾರೆ. ಈ ಮೂಲಕ ಅವರು 2ನೇ ಸ್ಥಾನಕ್ಕೆ ಏರಿದ್ದಾರೆ" ಎಂದು ಅದು ಹೇಳಿದೆ. ವರದಿಯ ಪ್ರಕಾರ, ಭಾರತದ ಶ್ರೀಮಂತರು ಕಳೆದ 12 ತಿಂಗಳಲ್ಲಿ 316 ಬಿಲಿಯನ್ ಡಾಲರ್ ಅಥವಾ ಸುಮಾರು 40 ಪ್ರತಿಶತದಷ್ಟು ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ.

3ನೇ ಸ್ಥಾನಕ್ಕೆ ಏರಿದ ಒಪಿ ಜಿಂದಾಲ್:"ಒಪಿ ಜಿಂದಾಲ್ ಸಮೂಹದ ಮುಖ್ಯಸ್ಥೆ ಸಾವಿತ್ರಿ ಜಿಂದಾಲ್ ಮೊದಲ ಬಾರಿಗೆ 3 ನೇ ಸ್ಥಾನಕ್ಕೆ ಏರಿದ್ದಾರೆ. ಭಾರತದ 100 ಸಿರಿವಂತರ ಪಟ್ಟಿಯಲ್ಲಿರುವ ಒಟ್ಟು ಒಂಬತ್ತು ಮಹಿಳೆಯರ ಪೈಕಿ ಇವರೂ ಒಬ್ಬರು. ಕಳೆದ ವರ್ಷ ಸಿರಿವಂತರ ಪಟ್ಟಿಯಲ್ಲಿ 8 ಮಹಿಳೆಯರಿದ್ದರು." ಎಂದು ವರದಿ ತಿಳಿಸಿದೆ.

ಖಾಸಗಿ ಒಡೆತನದ ಲಸಿಕೆ ಉತ್ಪಾದಕ ಕಂಪನಿ ಬಯೋಲಾಜಿಕಲ್ ಇ ಅನ್ನು ನಿಯಂತ್ರಿಸುವ ಮಹಿಮಾ ದಾಟ್ಲಾ ಫೋರ್ಬ್ಸ್ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ನಾಲ್ವರಲ್ಲಿ ಒಬ್ಬರಾಗಿದ್ದಾರೆ.

ಇವರಿಗೆಲ್ಲ ಪಟ್ಟಿಯಲ್ಲಿ ಸ್ಥಾನ:ಜೆನೆರಿಕ್ ಔಷಧಿಗಳು ಮತ್ತು ಫಾರ್ಮಾ ಸರಕುಗಳ ತಯಾರಕರಾದ ಹೆಟೆರೊ ಲ್ಯಾಬ್ಸ್​ನ ಸಂಸ್ಥಾಪಕ ಬಿ. ಪಾರ್ಥ ಸಾರಥಿ ರೆಡ್ಡಿ, ಉಡುಪು ತಯಾರಕ ಶಾಹಿ ಎಕ್ಸ್ ಪೋರ್ಟ್ಸ್ ನ ಹರೀಶ್ ಅಹುಜಾ ಮತ್ತು ಸೌರ ಫಲಕಗಳು ಮತ್ತು ಮಾಡ್ಯೂಲ್ ಗಳನ್ನು ತಯಾರಿಸುವ ಪ್ರೀಮಿಯರ್ ಎನರ್ಜಿಸ್ ನ ಸ್ಥಾಪಕ ಮತ್ತು ಅಧ್ಯಕ್ಷ ಸುರೇಂದರ್ ಸಲೂಜಾ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಐದನೇ ಸ್ಥಾನಕ್ಕೆ ಜಿಗಿದ ದಿಲೀಪ್ ಸಾಂಘ್ವಿ:ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್​ನ ಸಂಸ್ಥಾಪಕ ದಿಲೀಪ್ ಸಾಂಘ್ವಿ 32.4 ಬಿಲಿಯನ್ ಡಾಲರ್​ನೊಂದಿಗೆ ಐದನೇ ಸ್ಥಾನಕ್ಕೆ ಜಿಗಿದರೆ, ಟೊರೆಂಟ್ ಗ್ರೂಪ್​ನ ಸಹೋದರರಾದ ಸುಧೀರ್ ಮತ್ತು ಸಮೀರ್ ಮೆಹ್ತಾ ತಮ್ಮ ಸಂಪತ್ತನ್ನು ದ್ವಿಗುಣಗೊಳಿಸಿ 16.3 ಬಿಲಿಯನ್ ಡಾಲರ್​ಗೆ ತಲುಪಿದ್ದಾರೆ.

ಗೋದ್ರೆಜ್ ಕುಟುಂಬದಿಂದ, ಗೋದ್ರೆಜ್ ಇಂಡಸ್ಟ್ರೀಸ್ ಗ್ರೂಪ್ ಅಡಿಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳನ್ನು ನಿಯಂತ್ರಿಸುವ ಸಹೋದರರಾದ ಆದಿ ಮತ್ತು ನಾದಿರ್ ಗೋದ್ರೆಜ್ ಮತ್ತು ಗೋದ್ರೆಜ್ ಎಂಟರ್ ಪ್ರೈಸಸ್ ಗ್ರೂಪ್ ಅಡಿಯಲ್ಲಿ ಖಾಸಗಿ ಒಡೆತನದ ಪ್ರಮುಖ ಗೋದ್ರೇಜ್ & ಬಾಯ್ಸ್ ಅನ್ನು ನಿಯಂತ್ರಿಸುವ ಅವರ ಸೋದರಸಂಬಂಧಿಗಳಾದ ಜಮ್ ಷೆಡ್ ಗೋದ್ರೆಜ್ ಮತ್ತು ಸ್ಮಿತಾ ಕೃಷ್ಣ ಗೋದ್ರೆಜ್ ಸಿರಿವಂತರ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ : ನೀನು ಇನ್ನಿಲ್ಲ ಎಂದು ಹೇಳುತ್ತಿದ್ದಾರೆ, ನಂಬುವುದು ಕಷ್ಟ - ಹೋಗಿ ಬಾ ಗೆಳೆಯ: ನಟಿ ಸಿಮಿ ಗರೆವಾಲ್​ ಭಾವುಕ

ABOUT THE AUTHOR

...view details