ಅಮರನಾಥ ಯಾತ್ರಾರ್ಥಿಗಳಿದ್ದ ಬಸ್‌ನ ಬ್ರೇಕ್ ಫೇಲ್ (ETV Bharat) ರಾಂಬನ್ (ಜಮ್ಮು-ಕಾಶ್ಮೀರ):ಅಮರನಾಥ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕರ ಬಸ್ ರಾಂಬನ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ. ಮಾಹಿತಿಯ ಪ್ರಕಾರ, ರಾಂಬನ್ ಜಿಲ್ಲೆಯ ಚೈಲಾನಾ ಪ್ರದೇಶದ ಬಳಿ ಶ್ರೀನಗರ - ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮರನಾಥ ಯಾತ್ರಾರ್ಥಿಗಳನ್ನು ತುಂಬಿದ ಬಸ್ ದುರಂತಕ್ಕೀಡಾಗಿದೆ. ಈ ವೇಳೆ, ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಕೆಲವು ಯಾತ್ರಿಕರು ಬಸ್‌ನಿಂದ ಜಂಪ್ ಮಾಡಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಪಂಜಾಬ್ ನೋಂದಣಿಯ ಬಸ್‌ನ ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನಾ ಶಿಬಿರದಲ್ಲಿ ಚಿಕಿತ್ಸೆ: ಘಟನೆಯಲ್ಲಿ ಯಾತ್ರಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಮೀಪದ ಸೇನಾ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮರನಾಥ ಯಾತ್ರಾರ್ಥಿಗಳನ್ನು ಕಾಶ್ಮೀರಕ್ಕೆ ಕರೆದೊಯ್ಯುತ್ತಿದ್ದ ಈ ಬಸ್ ನೋಂದಣಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಶ್ರೀ ಅಮರನಾಥ ಯಾತ್ರೆಯಿಂದ ಈ ಬಸ್ ಪಂಜಾಬ್‌ನ ಹೋಶಿಯಾರ್‌ಪುರಕ್ಕೆ ಹಿಂತಿರುಗುತ್ತಿತ್ತು ಎಂದು ತಿಳಿದು ಬಂದಿದೆ. ಪೊಲೀಸರು ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ಘಟನೆಯ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ತಪ್ಪಿದ ಭಾರಿ ಅನಾಹುತ: ಘಟನೆಯ ವೇಳೆ ಬಸ್ನಲ್ಲಿ ಸುಮಾರು 45 ಮಂದಿ ಇದ್ದಿದ್ದು, ಅದೃಷ್ಟವಶಾತ್ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂಬುದು ಗಮನಾರ್ಹ. ಬ್ರೇಕ್ ವೈಫಲ್ಯದಿಂದ ಈ ಅವಘಡ ಸಂಭವಿಸಿದ್ದು, ಚಾಲಕ ಹಾಗೂ ಭದ್ರತಾ ಪಡೆಗಳ ಜಾಣತನದಿಂದ ಭಾರಿ ಅನಾಹುತ ತಪ್ಪಿದೆ. ಬಸ್ನಲ್ಲಿದ್ದ ಕೆಲ ಪ್ರಯಾಣಿಕರು ಹೇಗೋ ಬಸ್‌ನಿಂದ ಹಾರಿ ಪ್ರಾಣ ಉಳಿಸಿಕೊಂಡರು. ಅದರ ಕೆಲವು ವಿಡಿಯೋಗಳು ಕೂಡ ಹೊರಬಂದಿವೆ. ಬ್ರೇಕ್ ವೈಫಲ್ಯದ ಮಾಹಿತಿ ಪಡೆದ ಪ್ರಯಾಣಿಕರು ಬಸ್‌ನಿಂದ ಜಿಗಿದಿರುವುದು ಕಂಡು ಬಂದಿದೆ. ಭಾರತೀಯ ಸೇನೆ ಮತ್ತು ಪೊಲೀಸರು NH44 ನಲ್ಲಿ ಸಂಭವಿಸಬೇಕಾಗಿದ್ದ ಭಾರಿ ಅಪಘಾತವನ್ನು ತಡೆದರು ಮತ್ತು ಅಮರನಾಥ ಯಾತ್ರಿಕರ ಬಸ್ ಕಂದಕಕ್ಕೆ ಬೀಳದಂತೆ ರಕ್ಷಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.
ಸೇನೆ ನಿಯೋಜನೆ: ಅಮರನಾಥ ಯಾತ್ರೆಗೆ ಸರ್ಕಾರದಿಂದ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ ಎಂಬುದನ್ನು ನೆನಪಿಡಿ. ಯಾತ್ರೆ ಪ್ರಾರಂಭವಾಗುವ ಸುಮಾರು ಎರಡು ತಿಂಗಳ ಮೊದಲು ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ ಮತ್ತು ಸರ್ಕಾರವು ರೂಪಿಸಿದ ಯೋಜನೆಯಂತೆ ಅಮರನಾಥ ಯಾತ್ರೆಗೆ ತೆರಳಲು ಯಾತ್ರಾರ್ಥಿಗಳಿಗೆ ಸೂಚಿಸಲಾಗಿದೆ. ಆದರೆ, ಇದನ್ನು ಲೆಕ್ಕಿಸದೇ ಕೆಲವು ಯಾತ್ರಾರ್ಥಿಗಳು ಸರ್ಕಾರದ ವ್ಯವಸ್ಥೆಗಳ ಬದಲಿಗೆ ತಾವಾಗಿಯೇ ಯಾತ್ರೆಗೆ ತೆರಳುತ್ತಿದ್ದಾರೆ. ಜಮ್ಮುವಿನ ಭಗವತಿ ನಗರದ ಬೇಸ್ ಕ್ಯಾಂಪ್‌ನಿಂದ ಕಾಶ್ಮೀರಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯಲು ವಿಶೇಷ ಬಸ್‌ಗಳ ಬೆಂಗಾವಲು ವ್ಯವಸ್ಥೆ ಮಾಡಲಾಗಿದೆ ಮತ್ತು ಯಾತ್ರಾರ್ಥಿಗಳ ಭದ್ರತೆಗಾಗಿ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ಶ್ರೀನಗರ - ಜಮ್ಮು ಹೆದ್ದಾರಿಯಲ್ಲಿ ನಿಯೋಜಿಸಲಾಗಿದೆ.
ಓದಿ:ಮಂಗಳೂರು: ಮಣ್ಣು ಕುಸಿತ - ಮಣ್ಣಿನಡಿ ಸಿಲುಕಿರುವ ಇಬ್ಬರು ಕಾರ್ಮಿಕರಲ್ಲಿ ಒಬ್ಬರ ರಕ್ಷಣೆ - Landslide in Mangaluru