ಬರ್ನಾಲಾ (ಪಂಜಾಬ್):ಶಿರೋಮಣಿ ಅಕಾಲಿ ದಳದ ಪ್ರಮುಖ ಮುಖಂಡರೊಬ್ಬರು ತನ್ನ ತಾಯಿ, ಮಗಳು ಮತ್ತು ಸಾಕು ನಾಯಿಗೆ ಗುಂಡಿಕ್ಕಿ ಕೊಲೆಗೈದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಜಾಬ್ನ ಬರ್ನಾಲಾ ಜಿಲ್ಲೆಯಲ್ಲಿ ನಡೆದಿದೆ. ಸ್ಥಳದಲ್ಲಿ ರಿವಾಲ್ವರ್ ಪತ್ತೆಯಾಗಿದ್ದು, ಮೃತದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಅಕಾಲಿ ದಳದ ನಾಯಕ ಕುಲಬೀರ್ ಸಿಂಗ್ ಮಾನ್, ಈತನ ತಾಯಿ ಬಲ್ವಂತ್ ಕೌರ್ (85), ಮಗಳು ನಿಮ್ರತ್ ಕೌರ್ (21) ಎಂಬುವರೇ ಮೃತರು ಎಂದು ಗುರುತಿಸಲಾಗಿದೆ. ಮನ್ ಸಿಂಗ್ ಪರವಾನಗಿಯ ರಿವಾಲ್ವರ್‌ನಿಂದ ಪುತ್ರಿ ನಿಮ್ರತ್ ಕೌರ್ ಅವರಿಗೆ ಮೊದಲು ಗುಂಡಿಕ್ಕಿದ್ದಾರೆ. ಬಳಿಕ ತಾಯಿ ಬಲ್ವಂತ್ ಕೌರ್ ಮತ್ತು ಸಾಕು ನಾಯಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಕೃತ್ಯದ ಬಳಿಕ ರಿವಾಲ್ವರ್‌ನಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾಲು ತರಲು ಹೋಗಿದ್ದ ಪತ್ನಿ ಬಚಾವ್!: ಇಲ್ಲಿನ ಲಖರಿವಾಲಾ ಚೌಕ್‌ನ ರಾಮರಾಜ್ಯ ಕಾಲೋನಿಯಲ್ಲಿ ಕುಲಬೀರ್ ಸಿಂಗ್ ಮಾನ್ ಮನೆ ಇದೆ. ಬೆಳಗ್ಗೆ ಕುಲಬೀರ್ ಸಿಂಗ್ ಪತ್ನಿ ರಮಣದೀಪ್ ಕೌರ್ ಹಾಲು ತರಲು ಹೊರಗೆ ಹೋಗಿದ್ದರು. ವಾಪಸ್ ಬರುವಷ್ಟರಲ್ಲಿ ಮನೆಯ ಗೇಟ್ ಒಳಗಿನಿಂದ ಲಾಕ್ ಆಗಿತ್ತು. ಇದನ್ನು ಗಮನಿಸಿದ ಕೌರ್ ಕೂಡಲೇ ಕಾಲೋನಿಯ ವಾಚ್‌ಮ್ಯಾನ್‌ಗೆ ಕರೆ ಮಾಡಿ ಗೇಟ್ಅನ್ನು ತೆಗೆಸಿದ್ದರು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸತ್ವೀರ್ ಸಿಂಗ್ ಹೇಳಿದ್ದಾರೆ.