ಅಮರಾವತಿ (ಆಂಧ್ರ ಪ್ರದೇಶ): ಭಾರಿ ಮಳೆ ಮತ್ತು ಪ್ರವಾಹಕ್ಕೆ ತುತ್ತಾಗಿರುವ ವಿಜಯವಾಡದಲ್ಲಿ ಸಂತ್ರಸ್ತರಿಗೆ ಆಹಾರ ಪ್ಯಾಕೆಟ್, ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುವ ಕೆಲಸಕ್ಕೆ ಎನ್‌ಡಿಆರ್‌ಎಫ್ ತಂಡ ಮತ್ತು ಸ್ಥಳೀಯ ಅಧಿಕಾರಿಗಳು ಮುಂದಾಗಿದ್ದಾರೆ.
ದೋಣಿಗಳು ಮತ್ತು ಹೆಲಿಕಾಪ್ಟರ್‌ಗಳು ಹೋಗಲು ಸಾಧ್ಯವಾಗದ ಪ್ರದೇಶಗಳಲ್ಲಿ ಆಹಾರ ಪೂರೈಕೆಗೆ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಎನ್‌ಡಿಆರ್‌ಎಫ್ ಸಿಬ್ಬಂದಿ 6 ಹೆಲಿಕ್ಯಾಪ್ಟರ್ ಮತ್ತು 15 ಡ್ರೋನ್‌ಗಳ ಮೂಲಕ ಆಹಾರ ವಿತರಣಾ ಕಾರ್ಯ ನಡೆಸುತ್ತಿದೆ. ಸಂತ್ರಸ್ತರಿಗೆ ನೀಡಲಾಗುತ್ತಿರುವ ಆಹಾರದ ಪ್ಯಾಕೆಟ್‌ನಲ್ಲಿ ಬಿಸ್ಕೆಟ್, ಹಣ್ಣು ಮತ್ತು ಹಾಲು, ಔಷಧಗಳಿವೆ. ಎನ್‌ಡಿಆರ್‌ಎಫ್ ತಂಡ, ಕೇಂದ್ರದ ಇತರೆ ರಕ್ಷಣಾ ಪಡೆಗಳು ಮತ್ತ ಜಿಲ್ಲಾಡಳಿತ ಆಹಾರ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳನ್ನು ಹೆಲಿಕ್ಯಾಪ್ಟರ್ ಮೂಲಕವೂ ಸಂತ್ರಸ್ತರಿಗೆ ಒದಗಿಸುತ್ತಿದೆ.
ಆಂಧ್ರ ಪ್ರದೇಶದ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ, ಸಚಿವರು, ಐಎಎಸ್ ಅಧಿಕಾರಿಗಳು ಮತ್ತು ಐಪಿಎಸ್ ಅಧಿಕಾರಿಗಳು ವಾರ್ಡ್ ಮೂಲಕವೂ ರಕ್ಷಣಾ ಚಟುವಟಿಕೆಗೆ ಮುಂದಾಗಿದ್ದಾರೆ. ಸುಮಾರು 43,417 ಮಂದಿ ಸಂತ್ರಸ್ತರನ್ನು ಈಗಾಗಲೇ ನಿರಾಶ್ರಿತ ಕೇಂದ್ರ ತಲುಪಿಸಲಾಗಿದೆ. 48 ಎನ್‌ಡಿಆರ್‌ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಸಂತ್ರಸ್ತರಿಗಾಗಿ 197 ಮೆಡಿಕಲ್ ಕ್ಯಾಂಪ್‌ಗಳನ್ನು ನಿಯೋಜಿಸಿದೆ.
ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿ: ಆಂಧ್ರಪ್ರದೇಶದಲ್ಲಿನ ಪ್ರವಾಹದಿಂದ ಲಕ್ಷಾಂತರ ಹೆಕ್ಟೇರ್ ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಅಧಿಕಾರಿಗಳ ಅಂದಾಜಿನಂತೆ, 20 ಜಿಲ್ಲೆಗಳಲ್ಲಿ 4.67 ಲಕ್ಷ ಹೆಕ್ಟೇರ್ ಬೆಳೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ. ಪಶ್ಚಿಮ ಗೋದವರಿ ಜಿಲ್ಲೆಯಲ್ಲಿ ಕೆಲವು ಕಡೆ ಇನ್ನೂ ಪ್ರವಾಹ ತಗ್ಗಿಲ್ಲ. 65,000 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ ಮತ್ತು ಭತ್ತ ನಷ್ಟವಾಗಿದೆ. ಎನ್ಟಿಆರ್ ಜಿಲ್ಲೆಯಲ್ಲಿ 32,000 ಎಕರೆ ಪ್ರದೇಶ ಮತ್ತು ನಂದಯಲಾ ಜಿಲ್ಲೆಯಲ್ಲಿ 25,000 ಎಕರೆ ಪ್ರದೇಶದಲ್ಲಿದ್ದ ಬೆಳೆಗಳು ಹಾನಿಗೊಳಗಾಗಿವೆ.