ಚೆನ್ನೈ: 13 ವರ್ಷದ ಹಿಂದೆ ಮಗು ಕಳೆದುಕೊಂಡ ತಮಿಳುನಾಡಿನ ಪೋಷಕರು ಆಕೆಗಾಗಿ ನಿರಂತರ ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಆಕೆ ಬೆಳೆದು 15ರ ಪ್ರಾಯದ ಹುಡುಗಿಯಾಗಿರಬಹುದು. ಆಕೆ ಹೇಗಿರುತ್ತಾಳೋ, ಏನೋ ಒಂದೂ ಪೋಷಕರಿಗೆ ತಿಳಿಯದು. ಹೀಗಿದ್ದರೂ ಆಕೆಯ ಬರುವಿಕೆಗಾಗಿ ಹಗಲಿರುಳು ಕನವರಿಸುತ್ತಿದ್ದಾರೆ. ಮಗುವಿನ ಪತ್ತೆಗೆ ಪೊಲೀಸರು ಇದೀಗ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಮಗುವಿನ ಫೋಟೋವನ್ನು ಎಐ ಜನರೇಡೆಟ್ ಇಮೇಜ್ ಮೂಲಕ ರಚಿಸಿ, ಆಕೆ 15ನೇ ವಯಸ್ಸಿನಲ್ಲಿ ಹೇಗೆ ಕಾಣಿಸಬಹುದು ಎಂದು ಚಿತ್ರಿಸಿದ್ದಾರೆ.
ಮಗು ಕಾಣೆಯಾಗಿದ್ದು ಹೇಗೆ?:ತಮಿಳುನಾಡಿನ ಸಾಲಿಗ್ರಾಮ್ನ ನಿವಾಸಿಗಳಾದ ವಸಂತಿ ಮತ್ತು ಗಣೇಶನ್ ದಂಪತಿಯ ಮಗಳು ಕವಿತಾ ಹದಿಮೂರು ವರ್ಷದ ಹಿಂದೆ ನಾಪತ್ತೆಯಾಗಿದ್ದಳು. 2011ರ ಸೆಪ್ಟೆಂಬರ್ 19ರಂದು ಮನೆಯ ಬಳಿ ಆಟವಾಡುತ್ತಿದ್ದ ಕಂದಮ್ಮ ಸಂಜೆ 5 ಗಂಟೆ ಸುಮಾರಿಗೆ ಕಣ್ಮರೆಯಾಗಿದ್ದಳು. ಮಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಈ ಪ್ರಕರಣವನ್ನು 2022ರಲ್ಲಿ ಪೊಲೀಸರು ಕಡತದಿಂದಲೂ ತೆಗೆದು ಹಾಕಿದ್ದರು. ಇದಾದ ಬಳಿಕವೂ ಪೋಷಕರು ತಮ್ಮ ಮಗಳ ಹುಡುಕಾಟಕ್ಕೆ ಸಾಕಷ್ಟು ಶಕ್ತಿ ಮತ್ತು ಹಣ ವ್ಯಯಿಸಿದ್ದಾರೆ. ಕೋರ್ಟ್ ಮೂಲಕವೂ ಹೋರಾಟ ನಡೆಸಿದ್ದಾರೆ. ಅಂತಿಮವಾಗಿ ಕೋರ್ಟ್ ಮಧ್ಯಪ್ರವೇಶದಿಂದ ಅಧಿಕಾರಿಗಳು ತಂತ್ರಜ್ಞಾನದ ನೆರವು ಪಡೆದು ಮಗುವಿನ ಚಹರೆ ಈಗ ಹೇಗಿರಬಹುದು ಎಂದು ರಚಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗಣೇಶನ್, "ಕವಿತಾಳ ನೆನಪಿಗೆ ಉಳಿದಿರುವುದು ನಮ್ಮ ಮನೆಯಲ್ಲಿದ್ದ ಎರಡು ಫೋಟೋಗಳು ಮಾತ್ರ. ಆಕೆ ಒಂದು ಮತ್ತು ಎರಡು ವರ್ಷದ ಮಗುವಾಗಿದ್ದಾಗ ತೆಗೆದ ಚಿತ್ರಗಳನ್ನು ಪೊಲೀಸರು ಪಡೆದಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದಿಂದ 15ನೇ ವಯಸ್ಸಿನಲ್ಲಿ ಹೇಗಿರುತ್ತಾಳೆ ಎಂದು ರಚಿಸಿದ್ದಾರೆ" ಎಂದು ತಿಳಿಸಿದರು.