ಶ್ರೀನಗರ:ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಾರ್ಗಿಲ್‌ಗೆ ಭೇಟಿ ನೀಡಲಿದ್ದಾರೆ. ಭೇಟಿ ಹಿನ್ನೆಲೆ ಕಾಶ್ಮೀರ ಕಣಿವೆಯಲ್ಲಿ ಬಹುಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ದ್ರಾಸ್ ಎಂಬ ಸ್ಥಳಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ.
ಶುಕ್ರವಾರ ಬೆಳಿಗ್ಗೆ 9:20ರ ಸುಮಾರಿಗೆ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಅವರು, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಅದಕ್ಕೂ ಮುನ್ನ ವಿಶೇಷ ವಿಮಾನದ ಮೂಲಕ ಬೆಳಗ್ಗೆ ಶ್ರೀನಗರಕ್ಕೆ ಆಗಮಿಸಲಿರುವ ಅವರು, ನಂತರ ಹೆಲಿಕಾಪ್ಟರ್ ಮೂಲಕ ಕಾರ್ಗಿಲ್ ಜಿಲ್ಲೆಯ ದ್ರಾಸ್‌ಗೆ ತೆರಳಲಿದ್ದಾರೆ. ಅಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಪ್ರಕಟಣೆ ಹೊರಡಿಸಿದೆ.
ಪ್ರಧಾನಿಗಳ ಭೇಟಿ ಹಿನ್ನೆಲೆ ಕಾಶ್ಮೀರದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀನಗರದಲ್ಲಿ ಬುಧವಾರದಿಂದಲೇ ವಾಹನಗಳ ತಪಾಸಣೆ ಮತ್ತು ಪರಿಶೀಲನೆ ಆರಂಭಿಸಲಾಗಿದೆ. ಭದ್ರತಾ ಸಿಬ್ಬಂದಿಯನ್ನು ಜಾಗರೂಕರಾಗಿರುವಂತೆ ಮತ್ತು ಎಲ್ಲರ ಮೇಲೆ ಹದ್ದಿನ ಕಣ್ಣಿಡುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಪ್ರಧಾನಿ ಮೋದಿ ಅವರು, ಶಿಂಕುನ್ - ಲಾ - ಟನಲ್ ಯೋಜನೆಯ ಕಾಮಗಾರಿಗೆ ವರ್ಚುಯಲ್ ಮೂಲಕ ಬಟನ್ ಒತ್ತುವ ಮೂಲಕ ಚಾಲನೆ ನೀಡಲಿದ್ದಾರೆ. 4.1 ಕಿಮೀ ಉದ್ದದ ಟ್ವಿನ್-ಟ್ಯೂಬ್ ಸುರಂಗ ಕೊರೆಯ ಈ ಯೋಜನೆ ಇದಾಗಿದ್ದು, ಇದು ಲೇಹ್‌ಗೆ ಎಲ್ಲಾ ಹವಾಮಾನಗಳ ಸಂಪರ್ಕ ಒದಗಿಸುತ್ತದೆ. ನಿಮು - ಪಾಡುಮ್ - ದರ್ಚಾ ರಸ್ತೆಯಲ್ಲಿ ಸುಮಾರು 15,800 ಅಡಿ ಎತ್ತರದಲ್ಲಿ ಈ ಟನಲ್ ನಿರ್ಮಿಸಲಾಗುತ್ತಿದೆ. ವಿಶ್ವದ ಅತಿ ಎತ್ತರದ ಸುರಂಗ ಇದಾಗಲಿದ್ದು, ಈ ಯೋಜನೆ ಸಿದ್ಧಗೊಂಡರೆ ಭಾರೀ ಯಂತ್ರೋಪಕರಣಗಳನ್ನು ಸುಲಭವಾಗಿ ಸಾಗಿಸಬಹುದು ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.
1999ರಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಹುತಾತ್ಮರಾದ 500ಕ್ಕೂ ಹೆಚ್ಚು ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ಕಾರ್ಗಿಲ್ ವಿಜಯ್ ದಿವಸ್ ಅನ್ನು ಪ್ರತಿ ವರ್ಷ ಜುಲೈ 26 ರಂದು ಆಚರಿಸಲಾಗುತ್ತದೆ. ವಿಜಯ್ ದಿವಸ್ ಸಂದರ್ಭದಲ್ಲಿ, ಸೇನೆ ಮತ್ತು ಅವರ ಕುಟುಂಬದವರು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತಾರೆ. ಜೂನ್ 24 ರಂದು ಪ್ರಾರಂಭವಾಗಲಿರುವ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಜೂನ್ 26 ರಂದು ಪ್ರಧಾನ ಮಂತ್ರಿ ಅಥವಾ ರಕ್ಷಣಾ ಸಚಿವರ ಭೇಟಿಯೊಂದಿಗೆ ಕೊನೆಗೊಳ್ಳುತ್ತದೆ.
ಪ್ರಧಾನಮಂತ್ರಿ ಭೇಟಿಗಾಗಿ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕವನ್ನು ಅಲಂಕರಿಸಲಾಗಿದೆ. ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್, ಬ್ರಿಗೇಡಿಯರ್ (ಡಾ) ಬಿಡಿ ಮಿಶ್ರಾ (ನಿವೃತ್ತ) ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವಿವಿಧ ಹಂತದ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ:ಭಾರತೀಯ ಶೌರ್ಯ ಕಥೆಗಳಲ್ಲಿ ಮಿನುಗುವ ನಕ್ಷತ್ರವಾಗಿ ಉಳಿದ ಕ್ಯಾಪ್ಟನ್ ವಿಕ್ರಮ್ ಬಾತ್ರಾ - Captain Vikram Batra