ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಲಡಾಖ್ ಮತ್ತು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕಾಶ್ಮೀರ ವಿಧಾನಸಭೆಗೆ ಇದೇ ಸೆಪ್ಟೆಂಬರ್ 18 ರಂದು ಚುನಾವಣೆ ನಡೆಯಲಿದೆ. ಇತ್ತ 2019 ಕ್ಕೂ ಮೊದಲು ಜಮ್ಮು ಕಾಶ್ಮೀರದ ಭಾಗವಾಗಿದ್ದ ಲಡಾಖ್ನಲ್ಲೂ ಚಟುವಟಿಕೆಗಳು ಗರಿಗೆದರಿದ್ದು, ಪ್ರತ್ಯೇಕ ರಾಜ್ಯದ ಕೂಗು ಮತ್ತಷ್ಟು ಬಲ ಪಡೆದುಕೊಂಡಿದೆ.
ಕಾಶ್ಮೀರ ವಿಧಾನಸಭಾ ಚುನಾವಣೆಯ ಹೊತ್ತಲ್ಲಿ, ತಮಗೂ ರಾಜ್ಯ ಸ್ಥಾನಮಾನವನ್ನು ಮರಳಿ ನೀಡಬೇಕು ಎಂದು ಕೋರಿ ಲಡಾಖ್ ಪ್ರಜೆಗಳು, ಅಲ್ಲಿನ ಸಂಘಟನೆಗಳು ಸೆಪ್ಟೆಂಬರ್ 1 ರಿಂದ ಲೇಹ್ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿವೆ.
ರಾಜ್ಯತ್ವದ ಹೋರಾಟಕ್ಕಾಗಿ ರಚಿತವಾಗಿರುವ ಲೇಹ್ ಅಪೆಕ್ಸ್ ಬಾಡಿ (LAB), ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA) ನಾಯಕರು ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಈ ಹೋರಾಟ ರೂಪಿಸಿವೆ. ಜಮ್ಮು ಕಾಶ್ಮೀರದಲ್ಲಿ ಮೊದಲ ಹಂತದ ಮತದಾನಕ್ಕೂ ಮೊದಲು ಲಡಾಖ್ನಿಂದ ದೆಹಲಿಗೆ ಪಾದಯಾತ್ರೆ ನಡೆಸಲು ಸಂಘಟನೆಗಳು ನಿರ್ಧರಿಸಿವೆ.
ರಾಜ್ಯ ಸ್ಥಾನಮಾನ ಮರಳಿ ಸ್ಥಾಪನೆ ಜೊತೆಗೆ ವಿಧಾನಸಭೆ ರಚನೆ, ಸಂವಿಧಾನದ ಆರನೇ ಪರಿಚ್ಛೇದದಲ್ಲಿ ವಿಶೇಷ ಪ್ರಾತಿನಿಧ್ಯ, ನೇಮಕಾತಿಗಾಗಿ ಸಾರ್ವಜನಿಕ ಸೇವಾ ಆಯೋಗ ರಚನೆ, ಹೆಚ್ಚುವರಿ ಸಂಸತ್ ಸ್ಥಾನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಂಘಟನೆಗಳು ಮಂಡಿಸಿವೆ.
ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಲೆಫ್ಟಿನೆಂಟ್ ಗವರ್ನರ್ ಮತ್ತು ಅವರ ಸಲಹೆಗಾರರು ನಿರ್ವಹಿಸುತ್ತಿದ್ದಾರೆ. ವಿಶ್ವದ ಅತಿ ಎತ್ತರವಾದ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ನೀಡುವವರೆಗೆ ಅಲ್ಲಿನ ಜನರಿಗೆ ಮತದಾನದ ಹಕ್ಕು ಲಭ್ಯವಾಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಮಾತ್ರ ಜನರು ಒಂದು ಸಂಸದ ಸ್ಥಾನಕ್ಕಾಗಿ ಮತದಾನದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಪ್ರಜಾಪ್ರಭುತ್ವದ ಹಕ್ಕುಗಳು ವಂಚಿತ:370ನೇ ವಿಧಿಯನ್ನು ರದ್ದುಪಡಿಸಿದ ನಂತರ ಲಡಾಖ್‌ನ ಜನರು ಮತದಾನ ಮತ್ತು ಪ್ರಜಾಪ್ರಭುತ್ವದ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಶಾಸಕಾಂಗ, ಹಣಕಾಸು ಮತ್ತು ಆಡಳಿತವನ್ನು ಮರುಸ್ಥಾಪಿಸಲು ಬಯಸುತ್ತೇವೆ. ನಮ್ಮ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಆಲಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಯುತ್ತದೆ ಎಂದು ಕಾರ್ಗಿಲ್‌ನ ಮಾಜಿ ಕಾಂಗ್ರೆಸ್ ಶಾಸಕ ಅಸ್ಗರ್ ಅಲಿ ಕರ್ಬಲೈ ಹೇಳಿದ್ದಾರೆ.
ಲಡಾಖ್‌ನ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತ ಸಾಜದ್ ಕಾರ್ಗಿಲಿ ಮಾತನಾಡಿ, ವಿದ್ಯುತ್, ನೈರ್ಮಲ್ಯ ಮತ್ತು ರಸ್ತೆ ಮೂಲಸೌಕರ್ಯದಂತಹ ಅಭಿವೃದ್ಧಿಗಾಗಿ ಕೌನ್ಸಿಲ್‌ಗಳನ್ನು ಆಯ್ಕೆ ಮಾಡಲಾಗಿದೆ. ಶಾಸಕಾಂಗ ಅಧಿಕಾರವನ್ನು ಕೌನ್ಸಿಲ್‌ಗಳು ನಡೆಸಲು ಸಾಧ್ಯವಿಲ್ಲ. ಲಡಾಖ್‌ನ ಜನರು ಪೂರ್ಣ ರಾಜ್ಯತ್ವವನ್ನು ಬಯಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಲಡಾಖ್ನಲ್ಲಿ 3 ಲಕ್ಷ ಜನಸಂಖ್ಯೆ ಇದ್ದು, ಲೇಹ್ ಮತ್ತು ಕಾರ್ಗಿಲ್ನಲ್ಲಿ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್‌ಗಳನ್ನು ಹೊಂದಿದೆ. ಅಭಿವೃದ್ಧಿ ಕಾರ್ಯಗಳಿಗಾಗಿ ಕೌನ್ಸಿಲರ್‌ಗಳನ್ನು ಆಯ್ಕೆ ಮಾಡಲಾಗಿದೆ. ಈ ಹಿಲ್ ಕೌನ್ಸಿಲ್‌ಗಳನ್ನು 1995 ರಲ್ಲಿ ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್ ಆಕ್ಟ್ 1995 ರ ಅಡಿಯಲ್ಲಿ ರಚಿಸಲಾಗಿದೆ.
ಇದನ್ನೂ ಓದಿ:ಕಾರ್ಗಿಲ್ಗೆ ಪ್ರಧಾನಿ ಮೋದಿ ಭೇಟಿ: ಮತ್ತೆ ಮುನ್ನೆಲೆಗೆ ಬಂದ ಲಡಾಖ್ಗೆ ರಾಜ್ಯ ಸ್ಥಾನಮಾನದ ಬೇಡಿಕೆ - Ladakh statehood demand