ಕರ್ನಾಟಕ

karnataka

ETV Bharat / bharat

ಸೌರಶಕ್ತಿ ಯೋಜನೆಗೆ ಲಂಚ ನೀಡಿಲ್ಲ, ಆರೋಪದ ವಿರುದ್ಧ ಕಾನೂನು ಹೋರಾಟ: ಅದಾನಿ ಗ್ರೂಪ್​​ - ADANI GROUP

ಸೌರಶಕ್ತಿ ಯೋಜನೆ ಗುತ್ತಿಗೆ ಪಡೆಯುವಲ್ಲಿ ಲಂಚ ನೀಡಲಾಗಿದೆ ಎಂಬ ಅಮೆರಿಕದ ಆರೋಪವನ್ನು ಅದಾನಿ ಸಮೂಹ ಸಂಸ್ಥೆಯು ನಿರಾಕರಿಸಿದೆ. ಜೊತೆಗೆ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದೆ.

ಅದಾನಿ ಗ್ರೂಪ್​​
ಅದಾನಿ ಗ್ರೂಪ್​​ (ETV Bharat)

By ETV Bharat Karnataka Team

Published : Nov 21, 2024, 4:14 PM IST

ನವದೆಹಲಿ:ಸೌರಶಕ್ತಿ ಯೋಜನೆಯ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಸುಮಾರು 2,100 ಕೋಟಿ ರೂಪಾಯಿ ಲಂಚ ನೀಡಲಾಗಿದೆ ಎಂಬ ಅಮೆರಿಕದ ಆರೋಪವನ್ನು ಅದಾನಿ ಗ್ರೂಪ್​ ನಿರಾಕರಿಸಿದೆ. ದೇಶದ ಕಾನೂನು ಮತ್ತು ನಿಯಮಾವಳಿಗಳನ್ನು ಸಂಸ್ಥೆಯು ಕಡ್ಡಾಯವಾಗಿ ಪಾಲಿಸುತ್ತದೆ ಎಂದು ಸ್ಪಷ್ಟನೆ ನೀಡಿದೆ.

ಅದಾನಿ ಗ್ರೀನ್‌ನ ನಿರ್ದೇಶಕರ ವಿರುದ್ಧ ಅಮೆರಿಕದ ಡಿಪಾರ್ಟ್​ಮೆಂಟ್ ಆಫ್ ಜಸ್ಟೀಸ್ ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್​​ಚೇಂಜ್ ಕಮಿಷನ್ ಮಾಡಿದ ಆರೋಪಗಳು ಆಧಾರ ರಹಿತವಾಗಿವೆ. ಇದನ್ನು ಸಂಸ್ಥೆಯು ಸ್ಪಷ್ಟವಾಗಿ ನಿರಾಕರಿಸುತ್ತದೆ ಎಂದು ವಕ್ತಾರರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೊತೆಗೆ, ಆರೋಪದ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

ಸೌರ ಶಕ್ತಿ ಯೋಜನೆಗಳ ಗುತ್ತಿಗೆ ಪಡೆಯಲು ಭಾರತದ ಅಧಿಕಾರಿಗಳಿಗೆ 2020ರಿಂದ 2024ರ ಮಧ್ಯಭಾಗದಲ್ಲಿ 250 ಮಿಲಿಯನ್​ ಡಾಲರ್​ (2100 ಕೋಟಿ ರೂ.) ಅಧಿಕ ಲಂಚ ನೀಡಿದ ಪ್ರಕರಣದಲ್ಲಿ ಗೌತಮ್ ಅದಾನಿ ಮತ್ತು ಅಳಿಯ ಸಾಗರ್ ಅದಾನಿ ಭಾಗಿಯಾಗಿದ್ದಾರೆ ಎಂದು ಅಮೆರಿಕದ ಪ್ರಾಸಿಕ್ಯೂಷನ್​ ಆರೋಪಿಸಿದೆ.

ಷೇರುದಾರರ ಪರ ಸಂಸ್ಥೆ:ಅದಾನಿ ಗ್ರೂಪ್​ ವಿರುದ್ಧ ಮಾಡಲಾಗಿರುವ ಎಲ್ಲಾ ಆರೋಪಗಳನ್ನು ಕಾನೂನು ಅಡಿಯಲ್ಲಿ ಅಮೆರಿಕದಲ್ಲೇ ಎದುರಿಸಲಾಗುವುದು. ಅದಾನಿ ಸಮೂಹವು ತನ್ನೆಲ್ಲಾ ಕಾರ್ಯಗಳನ್ನು ನ್ಯಾಯ ವ್ಯಾಪ್ತಿಯಲ್ಲಿ ಪಾರದರ್ಶಕವಾಗಿ ಮತ್ತು ಮಾನದಂಡಗಳನ್ನು ಅನುಸರಿಸಿಯೇ ಮಾಡುತ್ತದೆ. ನಮ್ಮ ಷೇರುದಾರರು ಮತ್ತು ಸಿಬ್ಬಂದಿಯ ಹಿತ ಕಾಪಾಡುವುದೇ ನಮ್ಮ ಗುರಿ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕ ಮಾಡಿದ ಆರೋಪವೇನು?ಶತಕೋಟಿ ಡಾಲರ್ ಸೋಲಾರ್ ಯೋಜನೆಯ ಗುತ್ತಿಗೆ ಪಡೆಯಲು ಅದಾನಿ ಸಮೂಹ ಸಂಸ್ಥೆಯು ಭಾರತ ಸರ್ಕಾರದ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಕಾರ್ಯಕಾರಿ ನಿರ್ದೇಶಕ ಸಾಗರ ಅದಾನಿ, ಸಂಸ್ಥೆಯ ಮಾಜಿ ಸಿಇಒ ವಿನೀತ್ ಜೈನ್ ಅವರು ಈ ವಂಚನೆಯ ಪಾಲುದಾರರು ಎಂದು ನ್ಯೂಯಾರ್ಕ್​ನ ಈಸ್ಟರ್ನ್‌ ಜಿಲ್ಲೆಯ ಅಟಾರ್ನಿ ಆರೋಪಿಸಿದ್ದಾರೆ.

ಕುಸಿದ ಷೇರುಗಳ ಮೌಲ್ಯ:ಅಮೆರಿಕದ ಆರೋಪದ ಬೆನ್ನಲ್ಲೇ, ಗುರುವಾರದ ಬೆಳಗಿನ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹ ಷೇರುಗಳು ಭಾರೀ ಕುಸಿತ ಕಂಡಿವೆ. ಅದಾನಿ ಸಮೂಹದ ಷೇರುಗಳು ಒಂದೇ ದಿನದಲ್ಲಿ 2.50 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟಕ್ಕೀಡಾಗಿವೆ. ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇಕಡಾ 22.99, ಅದಾನಿ ಪೋರ್ಟ್ಸ್ ಶೇಕಡಾ 20, ಅದಾನಿ ಎನರ್ಜಿ ಸೊಲ್ಯೂಷನ್ಸ್ ಶೇಕಡಾ 20, ಅದಾನಿ ಗ್ರೀನ್ ಎನರ್ಜಿ ಶೇಕಡಾ 19.53 ಮತ್ತು ಅದಾನಿ ಟೋಟಲ್ ಗ್ಯಾಸ್ ಶೇಕಡಾ 18.14 ರಷ್ಟು ಕುಸಿದಿವೆ. ಅದಾನಿ ಪವರ್ ಷೇರುಗಳು ಶೇಕಡಾ 17.79, ಅಂಬುಜಾ ಸಿಮೆಂಟ್ಸ್ ಶೇಕಡಾ 17.59, ಎಸಿಸಿ ಶೇಕಡಾ 14.54, ಎನ್ ಡಿಟಿವಿ ಶೇಕಡಾ 14.37 ಮತ್ತು ಅದಾನಿ ವಿಲ್ಮಾರ್ ಶೇಕಡಾ 10 ರಷ್ಟು ಕುಸಿತ ಕಂಡಿವೆ.

ಇದನ್ನೂ ಓದಿ:ಅದಾನಿ ಸಮೂಹ ಷೇರುಗಳು ಭಾರೀ ಕುಸಿತ: ₹2.45 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ನಷ್ಟ

ABOUT THE AUTHOR

...view details