ಗುವಾಹಟಿ(ಅಸ್ಸಾಂ):ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಫೇರ್‌ಪ್ಲೇ ಬೆಟ್ಟಿಂಗ್ ಅಪ್ಲಿಕೇಶನ್‌ನಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಲು ಪ್ರೋತ್ಸಾಹಿಸುವ ವಿವಾದಿತ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ವಿಚಾರಣೆ ನಡೆಸಿದೆ.
ವಿವಾದಿತ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ನಟಿಗೆ ಇ.ಡಿ. ಅಧಿಕಾರಿಗಳು ಸಮನ್ಸ್ ನೀಡಿದ್ದರು. ಇದರಿಂದ ಬಾಲಿವುಡ್ ನಟಿ ಗುರುವಾರ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿರುವ ಇಡಿ ಕಚೇರಿಗೆ ಹಾಜರಾಗಿದ್ದರು. ತಮ್ಮ ಪೋಷಕರೊಂದಿಗೆ ಮಧ್ಯಾಹ್ನ 1.25ರ ಸುಮಾರಿಗೆ ಗುವಾಹಟಿಯ ಇಡಿ ಕಚೇರಿಗೆ ಆಗಮಿಸಿದ್ದರು. ಅವರನ್ನು ಇ.ಡಿ. ಕಚೇರಿಯಲ್ಲಿ 5 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.
ನಟಿ ಕಾಣಿಸಿಕೊಂಡ ಜಾಹೀರಾತಿನ ಫೇರ್‌ಪ್ಲೇ ಆ್ಯಪ್, ದೇಶದಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದ ಮಹಾದೇವ್ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಆ್ಯಪ್ನ ಅಂಗಸಂಸ್ಥೆಯಾಗಿದೆ. ಇದರ ಮೇಲೆ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆಸಿದ ಆರೋಪವಿದೆ. ಇದಕ್ಕೆ ಸಂಬಂಧಿಸಿದ ಆ್ಯಪ್ನಲ್ಲಿ ತಮನ್ನಾ ನಟಿಸಿದ್ದರಿಂದ ಇ.ಡಿ. ವಿಚಾರಣೆಗೆ ಕರೆದಿತ್ತು.