ಹೈದರಾಬಾದ್ (ತೆಲಂಗಾಣ):ಮಧ್ಯಮ ವರ್ಗದ ಕುಟುಂಬದ ಮಕ್ಕಳು ಭವಿಷ್ಯದ ಬಗ್ಗೆ ಅನೇಕ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆ ಕನಸನ್ನು ಕನಸಾಗಿಸಲು ಭರವಸೆ ಎಂಬ ದಾರಿಯಲ್ಲಿ ಸಾಗುತ್ತಿರುತ್ತಾರೆ. ಆ ಕನಸುಗಳನ್ನು ನನಸಾಗಿಸಿಕೊಳ್ಳಲು ಕಷ್ಟಪಟ್ಟು ಶ್ರಮವಹಿಸುತ್ತಾರೆ. ಅಷ್ಟೇ ಅಲ್ಲ ತಾವೂ ಇಟ್ಟ ಗುರಿಯನ್ನು ತಲುಪಲು ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಒಂದೋ ಎರಡೋ ಸೋಲುಗಳು ಎದುರಾದಾಗ ‘ಇದೆಲ್ಲ ನಮ್ಮಿಂದಲ್ಲ ಆಗಲ್ಲ ಬೀಡು’ ಎಂದುಕೊಂಡು ಮನನೊಂದು ಕೊಳ್ಳುತ್ತಾರೆ. ಆದ್ರೆ ಈ ಇಬ್ಬರು ಯುವಕರ ಕಥೆಯೇ ಬೇರೆ.. ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಗುರಿಯನ್ನು ತಲುಪಿದ್ದಾರೆ. ಅವರಲ್ಲಿ ಒಬ್ಬರಾದ ಶ್ರೀಕಾಂತ್ ಒಂಬತ್ತು ಉದ್ಯೋಗಗಳನ್ನು ಪಡೆಯುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಇನ್ನೊಬ್ಬ ಯುವಕ ಉದಯ್ ಹಸನ್ ಒಂದೇ ವರ್ಷದಲ್ಲಿ ಎಂಟು ಉದ್ಯೋಗಗಳನ್ನು ಪಡೆದುಕೊಂಡು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.
ಸಹೋದರಿಯ ಸಹಾಯ, ಸ್ನೇಹಿತರ ಪ್ರೋತ್ಸಾಹ:ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮೂಲದ ಶ್ರೀಕಾಂತ್ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದವರು. 2014ರಲ್ಲಿ ತಂದೆ, 2019ರಲ್ಲಿ ತಾಯಿ ಮೃತಪಟ್ಟಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಅಕ್ಕ ಶ್ರೀಲಕ್ಷ್ಮಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿ ಜೀವನಕ್ಕೆ ಆಧಾರ ಸ್ತಂಭವಾಗಿದ್ದಾರೆ. ಓದು ಮುಂದುವರೆಸುತ್ತಲೇ ತನ್ನ ಕಿರಿಯ ಸಹೋದರ ಶ್ರೀಕಾಂತನನ್ನು ಓದಿಸುತ್ತಿದ್ದರು ಅಕ್ಕ ಶ್ರೀಲಕ್ಷ್ಮಿ.
ಸಹೋದರಿಯ ಪ್ರೋತ್ಸಾಹದಿಂದ 2020ರಲ್ಲಿ ಎಂಬಿಎ ಮುಗಿಸಿದ ಶ್ರೀಕಾಂತ್, 2021ರಲ್ಲಿ ಹೈದರಾಬಾದ್‌ನಲ್ಲಿ ಬ್ಯಾಂಕಿಂಗ್ ತರಬೇತಿ ಕೇಂದ್ರಕ್ಕೆ ಸೇರಿಕೊಂಡರು. ಮೊದಲ ಪ್ರಯತ್ನದಲ್ಲಿ ಬರೆದ ಪರೀಕ್ಷೆಗಳ ಫಲಿತಾಂಶ ನಿರಾಶಾದಾಯಕವಾಗಿದ್ದರೂ ಎದೆಗುಂದಲಿಲ್ಲ. ನೋಟಿಫಿಕೇಶನ್ ಬಂದಾಗಲೆಲ್ಲಾ ಪರೀಕ್ಷೆ ಬರೆಯುತ್ತಿದ್ದರು. 2022 ರಲ್ಲಿ ಸೌತ್ ಇಂಡಿಯಾ ಬ್ಯಾಂಕ್ಗೆ (ಖಾಸಗಿ) ಸೇರಿದರು. ಏಳು ತಿಂಗಳ ನಂತರ ರಾಜೀನಾಮೆ ನೀಡಿ ಮತ್ತೆ ತಯಾರಿ ಆರಂಭಿಸಿದರು. ಅವರು 2022 ರಲ್ಲಿ ಎರಡು ಉದ್ಯೋಗಗಳನ್ನು ಪಡೆದರೂ ಸಹ ಅವರು ಆ ಉದ್ಯೋಗಗಳಿಗೆ ಸೇರಲಿಲ್ಲ. 2023 ರಲ್ಲಿ ಬಿಡುಗಡೆಯಾದ ಹಲವು ಅಧಿಸೂಚನೆಗಳಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಗಳಿಗೆ ಹಾಜರಾದರು. ಇತ್ತೀಚೆಗೆ ಆ ಪರೀಕ್ಷೆಗಳ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಯಿತು. ಶ್ರೀಕಾಂತ್ ಸುಮಾರು ಏಳು ಉದ್ಯೋಗಗಳಿಗೆ ಆಯ್ಕೆ ಆಗಿ ಇತರರಿಗೆ ಮಾದರಿ ಆದರು.
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಅಧಿಕಾರಿ, ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಲೆಕ್ಕಾಧಿಕಾರಿ, ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯಲ್ಲಿ ಆಡಳಿತಾಧಿಕಾರಿ (ಹಣಕಾಸು ಖಾತೆಗಳ ತಜ್ಞರು), IBPS ಕ್ಲರ್ಕ್ ಬ್ಯಾಂಕ್ ಆಫ್ ಮಹಾರಾಷ್ಟ್ರ, ಉದ್ಯೋಗಿಗಳ ರಾಜ್ಯ ವಿಮಾ ನಿಗಮದಲ್ಲಿ ಉನ್ನತ ವಿಭಾಗದ ಗುಮಾಸ್ತ, ಸೌತ್ ಇಂಡಿಯನ್ ಬ್ಯಾಂಕ್ PO (Pvt.), ಕರೀಂನಗರ ಡಿಸಿಸಿಬಿಯಲ್ಲಿ ಕ್ಲರ್ಕ್, RRB (ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು) PO, RRB ಕ್ಲರ್ಕ್ ಆಗಿ ಉದ್ಯೋಗಗಳನ್ನು ಪಡೆದು, ಮೇರು ಸಾಧನೆ ಮಾಡಿದ್ದಾರೆ.