ನವದೆಹಲಿ:ಮಳೆ ಅಬ್ಬರಕ್ಕೆ ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಿ-1 ಟರ್ಮಿನಲ್ ಒಂದರಲ್ಲಿ ಮೇಲ್ಚಾವಣಿಯ ಒಂದು ಭಾಗ ಕುಸಿದು ಒಬ್ಬ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಗ್ನಿಶಾಮಕ ವಾಹನಗಳನ್ನು ಮೇಲ್ಚಾವಣಿ ಕುಸಿದಿರುವ ಸ್ಥಳಕ್ಕೆ ಬಂದಿವೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಮಾಹಿತಿಯ ಪ್ರಕಾರ, ರಾಜಧಾನಿ ದೆಹಲಿಯಲ್ಲಿ ಸಂಪೂರ್ಣ ಹವಾಮಾನ ಬದಲಾಗಿದ್ದು, ಭಾರಿ ಮಳೆಯಾಗುತ್ತಿದೆ. ಮಳೆಯ ಅಬ್ಬರಕ್ಕೆ ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಚಾವಣಿ ಕುಸಿದಿದೆ. ಈ ಪ್ರದೇಶದಲ್ಲಿ ನಿಲ್ಲಿಸಿದ್ದ ಕೆಲ ವಾಹನಗಳು ಸಂಪೂರ್ಣ ಜಖಂಗೊಂಡಿವೆ ಎಂದು ದೆಹಲಿ ಅಗ್ನಿಶಾಮಕ ಸೇವಾ ನಿರ್ದೇಶಕ ಅತುಲ್ ಗರ್ಗ್ ತಿಳಿಸಿದ್ದಾರೆ.
ದೆಹಲಿ ಅಗ್ನಿಶಾಮಕ ಸಿಬ್ಬಂದಿ ಪ್ರಕಾರ, ''3 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಸದ್ಯ ಮೇಲ್ಚಾವಣಿ ಕುಸಿದು ಕೆಲವು ವಾಹನಗಳು ಅವಶೇಷಗಳ ಅಡಿ ಸಿಲುಕಿವೆ. ಕೆಲವು ವಾಹನಗಳ ಮೇಲ್ಚಾವಣಿ ಕುಸಿದಿರುವ ಅಡಿಯಲ್ಲಿ ಸಿಲುಕಿ ಸಂಪೂರ್ಣ ಜಖಂಗೊಂಡಿವೆ. ಇನ್ನೂ ಕೆಲವು ವಾಹನಗಳು ತುಂಬಾ ಒಳಗೆ ಸಿಲುಕಿಕೊಂಡಿರುವ ಸಾಧ್ಯತೆ ಇದೆ'' ಎಂದು ತಿಳಿಸಿದರು.
ಟರ್ಮಿನಲ್ 1ರ ಕುಸಿತದಿಂದ ವಿಮಾನಗಳ ಮೇಲೆ ಪರಿಣಾಮ:ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಇಂಡಿಗೋ ಸಂಸ್ಥೆ, ''ಟರ್ಮಿನಲ್ 1ರಲ್ಲಿ ಹಾನಿಯಾಗಿರುವುದರಿಂದ, ಪ್ರಯಾಣಿಕರು ಟರ್ಮಿನಲ್‌ಗೆ ಪ್ರವೇಶಿಸಲು ಸಾಧ್ಯವಾಗದ ಕಾರಣಕ್ಕೆ ದೆಹಲಿಯಲ್ಲಿನ ವಿಮಾನವನ್ನು ರದ್ದುಗೊಳಿಸಲಾಗಿದೆ'' ಎಂದು ತಿಳಿಸಿದೆ. ಈಗಾಗಲೇ ಟರ್ಮಿನಲ್‌ನೊಳಗಿರುವ ಪ್ರಯಾಣಿಕರು ತಮ್ಮ ವಿಮಾನಗಳನ್ನು ಹತ್ತಲು ಸಾಧ್ಯವಾಗುತ್ತದೆ. ಆದರೆ, ಉಳಿದ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ನಿಮ್ಮ ವಿಮಾನದ ಸ್ಥಿತಿಯನ್ನು ತಿಳಿದುಕೊಳ್ಳಲು ಸಲಹೆ ನೀಡಲಾಗಿದೆ.
ಅಪಘಾತದ ನಂತರ ಆತಂಕಗೊಂಡ ಪ್ರಯಾಣಿಕರು:ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಪ್ರಯಾಣಿಕ ಯಶ್ ಮಾತನಾಡಿ, "ನಾನು ಬೆಂಗಳೂರಿಗೆ ಹೋಗುತ್ತಿದ್ದೆ, 8:15ಕ್ಕೆ ವಿಮಾನ ಪ್ರಯಾಣ ಇತ್ತು. ಬೆಳಗಿನ ಜಾವ 5.15ರ ಸುಮಾರಿಗೆ ಇಲ್ಲಿ ಚಾವಣಿ ಕುಸಿದಿದೆ. ವಿಮಾನ ನಿಲ್ದಾಣ ಪ್ರಾಧಿಕಾರವು ಸರಿಯಾಗಿ ಪ್ರಕ್ರಿಯೆ ನೀಡುತ್ತಿಲ್ಲ. ಪರಿಸ್ಥಿತಿ ನೋಡಿದರೆ ಇಲ್ಲಿಂದ ಕೆಲವು ವಿಮಾನಗಳು ಕಾರ್ಯನಿರ್ವಹಿಸಲಿವೆಯಂತೆ. ಇಲ್ಲಿ 700ರಿಂದ 800 ಜನರು ನಿಂತಿದ್ದಾರೆ'' ಎಂದು ತಿಳಿಸಿದ್ದಾರೆ.
ಪ್ರತಿಕ್ರಿಯಿಸಿದ ಮತ್ತೊಬ್ಬ ಪ್ರಯಾಣಿಕ, ಕೆಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ, ಕೆಲವು ವಿಳಂಬವಾಗಿದೆ ಎಂದು ವಿಮಾನಯಾನ ಸಂಸ್ಥೆಯು ನಮಗೆ ತಿಳಿಸಿದೆ. ಟರ್ಮಿನಲ್ 2ಗೆ ಹೋಗಬಹುದು. ಆದರೆ, 1ನೇ ಟರ್ಮಿನಲ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಟರ್ಮಿನಲ್ ಕುಸಿದಿದ್ದು ಯಾವಾಗ?:ಶುಕ್ರವಾರ ಮುಂಜಾನೆ ಎಡೆಬಿಡದೇ ಸುರಿದ ಮಳೆಯಿಂದಾಗಿ ಐಜಿಐ ವಿಮಾನ ನಿಲ್ದಾಣದ ಟಿ-1 ರ ಮೇಲ್ಚಾವಣಿಯ ಹಠಾತ್ತನೆ ಕುಸಿದಿದೆ. ಇದರಿಂದಾಗಿ ಅಲ್ಲಿ ನಿಂತಿದ್ದ ಕಾರು, ಟ್ಯಾಕ್ಸಿ ಜಖಂಗೊಂಡಿವೆ. ಘಟನೆಯ ಬಗ್ಗೆ ಪೊಲೀಸ್ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಅಗ್ನಿಶಾಮಕ ದಳದಿಂದ ಬಂದ ಮಾಹಿತಿಯ ಪ್ರಕಾರ, ಬೆಳಗ್ಗೆ 5.30ರ ಸುಮಾರಿಗೆ ಕರೆ ಬಂದಿತು. ನಂತರ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇತರ ಇಲಾಖೆಗಳ ತಂಡಗಳೂ ಸ್ಥಳದಲ್ಲಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಮಳೆ ಅಬ್ಬರಕ್ಕೆ ನಲುಗಿದ ದೆಹಲಿ:ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆಯ ನಂತರ, ಪ್ರಸ್ತುತ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೇ ದಿನದ ಮಳೆಗೆ ಇಡೀ ದೆಹಲಿ ಜಲಾವೃತವಾಗಿದೆ. ಲುಟಿಯನ್ಸ್ ವಲಯದಿಂದ ಪೂರ್ವ ದೆಹಲಿ, ಪಶ್ಚಿಮ ದೆಹಲಿಯವರೆಗಿನ ಎಲ್ಲಾ ಪ್ರದೇಶಗಳಲ್ಲಿ ಭಾರೀ ನೀರು ನಿಂತಿದೆ. ದೇಶದ ಅತಿ ದೊಡ್ಡ ವಿಮಾನ ನಿಲ್ದಾಣವಾದ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿಯೂ ಹಲವೆಡೆ ಜಲಾವೃತವಾಗಿರುವ ಬಗ್ಗೆ ವರದಿಯಾಗಿದೆ.
ದತ್ತ ಪಥ, ಅರಬಿಂದೋ ಮಾರ್ಗ, ಮೂಲಚಂದ್, ಮಧು ವಿಹಾರ್, ಭಿಕಾಜಿ ಕ್ಯಾಮಾ ಪ್ಲೇಸ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಜನರು ರಸ್ತೆಯಲ್ಲಿ ಸಂಚರಿಸಲು ತುಂಬಾ ಕಷ್ಟು ಅನುಭವಿಸಿದರು. ದೆಹಲಿಯ ಮಿಂಟೋ ರಸ್ತೆ ಪ್ರದೇಶದಲ್ಲಿ ಮಿಂಟೋ ಸೇತುವೆಯ ಕೆಳಗೆ ತುಂಬಿದ ನೀರಿನಲ್ಲಿ ಟ್ರಕ್ ಮತ್ತು ಕಪ್ಪು ಕಾರು ಮುಳುಗಿರುವುದು ಕಂಡುಬಂದಿದೆ.
ಸಫ್ದರ್‌ಜಂಗ್, ಏಮ್ಸ್ ಪ್ರದೇಶಗಳು ಜಲಾವೃತ:ನಿರಂತರ ಮಳೆಯಿಂದಾಗಿ ದೆಹಲಿಯ ಸಫ್ದರ್‌ಜಂಗ್ ಮತ್ತು ಏಮ್ಸ್ ಪ್ರದೇಶಗಳು ಜಲಾವೃತವಾಗಿವೆ. ಹಲವೆಡೆ ಆಂಬ್ಯುಲೆನ್ಸ್‌ಗಳು ಮುಳುಗಿದ್ದು, ಆಸ್ಪತ್ರೆ ಬಳಿ ಕೆಲವು ವಾಹನಗಳು ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿವೆ. ಪಾದಚಾರಿಗಳು ತುಂಬಾ ಪರದಾಡಿದರು. ಇನ್ನು ದೆಹಲಿಯ ಸರಿತಾ ವಿಹಾರ್ ಪ್ರದೇಶದಲ್ಲಿ ನೀರು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಆಗಿದೆ. ಐಟಿಒ ಪ್ರದೇಶದಲ್ಲಿ ಮಳೆ ನೀರಿನಲ್ಲಿ ವಾಹನಗಳು ಮುಳುಗುವ ಹಂತದಲ್ಲಿವೆ. ಅನೇಕ ವಾಹನಗಳು ಮತ್ತು ಬಸ್ಗಳು ಇಲ್ಲಿ ಸಿಕ್ಕಿಹಾಕಿಕೊಂಡಿರುವುದು ಕಂಡುಬರುತ್ತದೆ. ಇಲ್ಲಿದ್ದ ಪೊಲೀಸ್ ಬ್ಯಾರಿಕೇಡ್‌ಗಳು ಸಹ ಮುಳುಗಿ ಹೋಗಿವೆ.
ಇದನ್ನೂ ಓದಿ:ಹಾವೇರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ: 13 ಜನರ ದಾರುಣ ಸಾವು, ಬಾಲಕನಿಗೆ ಗಾಯ - ROAD ACCIDENT IN HAVERI