ಕಾಸರಗೋಡು(ಕೇರಳ):ಮನುಷ್ಯನಿಗೆ ಹಟ ಮತ್ತು ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಇದಕ್ಕೆ ವಯಸ್ಸು ಎಂಬುದು ಸವಾಲೇ ಅಲ್ಲ. ಇದನ್ನು ಕೇರಳದ ವ್ಯಕ್ತಿಯೊಬ್ಬ ಸಾಬೀತು ಮಾಡಿದ್ದಾರೆ. ತಾನು ಮಾಡುತ್ತಿದ್ದ ಗುಮಾಸ್ತ ಕೆಲಸವನ್ನು ಮೆಟ್ಟಿ ಇಂದು, ವಕೀಲರಾಗಿ ಗೌರವ ಸಂಪಾದನೆ ಮಾಡಿದ್ದಾರೆ. ಇದರ ಹಿಂದಿನ ಶ್ರಮ ಅಷ್ಟಿಷ್ಟಲ್ಲ ಎಂಬುದು ಮಾತ್ರ ವಿಶೇಷ.
ಕೇರಳದ ಗಡಿ ಜಿಲ್ಲೆಯಾದ ಕಾಸರಗೋಡಿನ ಕೊಸುಯಲ್ ಪಾಳ್ಯಂನ ಗಂಗಾಧರನ್ ಎಂಬವರೇ ಈ ಸಾಧಕರು. ನ್ಯಾಯಾಲಯದಲ್ಲಿ ಗುಮಾಸ್ತ (ಕ್ಲರ್ಕ್)ರಾಗಿ ಕೆಲಸ ಮಾಡುತ್ತಿದ್ದ ಇವರು, ಇದೀಗ ಅದೇ ನ್ಯಾಯಾಲಯದಲ್ಲಿ ವಕೀಲಿಕೆ ಆರಂಭಿಸಿದ್ದಾರೆ. ಅದೂ ತಮ್ಮ 52ನೇ ವಯಸ್ಸಿನಲ್ಲಿ!. ವಕೀಲರ ಕೇಸ್ ಫೈಲ್ಗಳನ್ನು ಸಾಗಿಸುತ್ತಿದ್ದ ವ್ಯಕ್ತಿ, ಈಗ ಅಂತಹ ಕೇಸ್ಗಳನ್ನು ತಾವೇ ವಹಿಸಿಕೊಂಡು ವಾದಿಸುತ್ತಿದ್ದಾರೆ.
ಸಾಧಕನ ಹಾದಿ..:ಗಂಗಾಧರನ್ 1992ರಲ್ಲಿ ಇಲ್ಲಿನ ನ್ಯಾಯಾಲಯದಲ್ಲಿ ಕ್ಲರ್ಕ್ ಆಗಿ ಸೇವೆಗೆ ಸೇರಿದ್ದರು. ಅಂದಿನಿಂದ, ಅನೇಕ ವಕೀಲರ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಹಲವಾರು ವಕೀಲರ ಸಂಪರ್ಕದಿಂದ ತಾವೂ ಲಾಯರ್ ಆಗಬೇಕು ಎಂಬ ಆಸೆ ಚಿಗುರೊಡೆದಿದೆ. ಇದನ್ನು ಸಾಕಾರ ಮಾಡಬೇಕು ಎಂದುಕೊಂಡು ಹಲವರ ಬಳಿ ಸಲಹೆಯನ್ನೂ ಪಡೆದಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿ ಹಲವು ಕಾರಣಗಳಿಂದ ಓದಲು ಸಾಧ್ಯವಾಗಿರಲಿಲ್ಲ. ಆ ಆಸೆಯನ್ನು ಅವರು ಪೂರ್ತಿ ಮಾಡಿಕೊಳ್ಳಲು ಬಯಸಿದ್ದರು.