ಅಲಿಗಢ (ಉತ್ತರ ಪ್ರದೇಶ):ರಮಾನಂದ ಪಂಥದ ನಾಲ್ವರು ಪ್ರಮುಖ ಜಗದ್ಗುರುಗಳಲ್ಲಿ ಒಬ್ಬರಾದ ಸ್ವಾಮಿ ರಾಮಭದ್ರಾಚಾರ್ಯರ ಕತ್ತು ಕೊಯ್ದು, ಕಣ್ಣು ಕೀಳುವವರಿಗೆ 5.50 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾನೆ. ಈ ಬಗ್ಗೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಶೋಧ ಕಾರ್ಯ ಶುರು ಮಾಡಿದ್ದಾರೆ.
ಇಲ್ಲಿನ ಬಾರ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಫುಸಾವಲಿ ಗ್ರಾಮದ ನಿವಾಸಿ ಡೇವಿಡ್ ಜಟ್ ಎಂಬ ಯುವಕನೇ ರಾಮಭದ್ರಾಚಾರ್ಯರ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಸ್ವಾಮೀಜಿಗಳ ಕತ್ತು ಕೊಯ್ದು ತಂದರೆ 2 ಲಕ್ಷ ರೂಪಾಯಿ, ಬೂಟಿನಿಂದ ಅವರ ತಲೆಗೆ ಹೊಡೆದವರಿಗೆ 50 ಸಾವಿರ ರೂಪಾಯಿ ಮತ್ತು ಕಣ್ಣು ಕಿತ್ತುವವರಿಗೆ 3 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ವಿಡಿಯೋದಲ್ಲಿ ಘೋಷಿಸುವುದು ಸೆರೆಯಾಗಿದೆ.
ರಾಮಭದ್ರಾಚಾರ್ಯರ ಬಗ್ಗೆ ಅವಹೇಳನಕಾರಿ ಮತ್ತು ಅವರ ಪ್ರಾಣಕ್ಕೆ ಬೆದರಿಕೆವೊಡ್ಡುವಂಥ ವಿಡಿಯೋ ಹೊರ ಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಚಲನವನ್ನುಂಟು ಮಾಡಿದೆ. ಅಲ್ಲದೇ, ವೈರಲ್ ವಿಡಿಯೋ ಆಗುತ್ತಿದ್ದಂತೆ ರಾಮ್ ಗೋಪಾಲ್ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಡೇವಿಡ್ ಜಟ್, ಸತ್ಯವೀರ್ ಸಿಂಗ್ ಎಂಬುವರ ಮಗನಾಗಿದ್ದು, ಈತ ನೋಯ್ಡಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.