ನವದೆಹಲಿ:ರಾಷ್ಟ್ರಪತಿ ಭವನದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವ ಸಂಪುಟದ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಸಾಂಗವಾಗಿ ನಡೆಯಿತು. ಕಾರ್ಯಕ್ರಮದ ನಡುಭಾಗದಲ್ಲಿ ರಾಷ್ಟ್ರಪತಿ ಭವನದೊಳಗೆ ಚಿರತೆಯಂತೆ ಕಾಣಿಸುವ ಪ್ರಾಣಿಯೊಂದು ಸುಳಿದಾಡಿದ್ದು, ಅದರ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಬಿಜೆಪಿ ಸಂಸದ ದುರ್ಗಾದಾಸ್ ಅವರು ಸಚಿವರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ಸ್ವೀಕರಿಸುವ ವೇಳೆ, ರಾಷ್ಟ್ರಪತಿ ಭವನದ ಮೆಟ್ಟಿಲುಗಳ ಮೇಲ್ಭಾಗದಲ್ಲಿ ಈ ಪ್ರಾಣಿ ಓಡಾಡಿದೆ. ಇದರ ದೃಶ್ಯ ನೇರಪ್ರಸಾರದ ವಿಡಿಯೋದಲ್ಲಿ ಸೆರೆಯಾಗಿದೆ. ಭವನದ ಮುಂದೆ ನಡೆದಾಡುತ್ತಾ ಅದು ಮತ್ತೆ ಅಲ್ಲಿಂದಲೇ ವಾಪಸ್ ಹೋಗಿರುವುದು ಕಂಡುಬಂದಿದೆ.
ರಾಷ್ಟ್ರಪತಿ ಭವನದ ಮೆಟ್ಟಿಲುಗಳ ಪಕ್ಕದಲ್ಲಿ ತಿರುಗಾಡಿದ ಪ್ರಾಣಿ ಯಾವುದೇ ತೊಂದರೆ ನೀಡದೇ ಅಲ್ಲಿಂದ ತೆರಳಿತು. ದುರ್ಗಾದಾಸ್ ಅವರು ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ರಿಜಿಸ್ಟರ್ ಬುಕ್‌ನಲ್ಲಿ ಸಹಿ ಹಾಕುವಾಗ ಪ್ರಾಣಿ ಅವರ ಹಿಂದಿನ ಭಾಗದಲ್ಲಿ ನಡೆದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಬಗ್ಗೆ ರಾಷ್ಟ್ರಪತಿ ಭವನ ಮತ್ತು ಅಧಿಕಾರಿಗಳಿಂದ ಈವರೆಗೂ ಯಾವುದೇ ಸ್ಪಷ್ಟನೆ ಬಂದಿಲ್ಲ.
ಚಿರತೆಯೋ, ಕಾಡು ಬೆಕ್ಕೋ?:ಕಾರ್ಯಕ್ರಮದ ಗದ್ದಲದಲ್ಲಿ ಪ್ರಾಣಿಯೊಂದು ಬಂದು ಹೋಗಿದ್ದನ್ನು ಯಾರೂ ಗಮನಿಸಿಲ್ಲ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿಯಾಗಿ ಅದನ್ನು ಗುರುತಿಸುತ್ತಿದ್ದಾರೆ. ಆಕೃತಿಯಲ್ಲಿ ದೊಡ್ಡದಾಗಿ ಕಾಣುತ್ತಿರುವ ಕಾರಣ ಇದನ್ನು 'ಚಿರತೆ' ಎಂದು ಕೆಲವರು ಹೇಳಿದ್ದರೆ, ಇನ್ನು ಕೆಲವರು 'ಕಾಡು ಬೆಕ್ಕಿನಂತಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.