ಕರ್ನಾಟಕ

karnataka

ETV Bharat / bharat

ಫೆಂಗಲ್ ಚಂಡಮಾರುತದ ಅಬ್ಬರ: ತಿರುವಣ್ಣಾಮಲೈ ಭೂಕುಸಿತದಲ್ಲಿ 7 ಜನ ಅವಶೇಷಗಳಡಿ ಸಿಲುಕಿರುವ ಶಂಕೆ

ಫೆಂಗಲ್ ಚಂಡಮಾರುತವು ತಮಿಳುನಾಡಿಗೆ ಅಪ್ಪಳಿಸಲಿದ್ದು, ಹಲವಡೆ ಅವಾಂತರ ಸೃಷ್ಟಿಸಿದೆ.

7 trapped in Thiruvannamalai Landslide : IIT Experts reaching spot
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ (ETV Bharat)

By ETV Bharat Karnataka Team

Published : Dec 2, 2024, 1:56 PM IST

ತಮಿಳುನಾಡು: 'ಫೆಂಗಲ್' ಚಂಡಮಾರುತದ ಪರಿಣಾಮ ತಮಿಳುನಾಡಿನ ವಿವಿಧೆಡೆ ಧಾರಾಕಾರ ಮಳೆ ಸುರಿಯತೊಡಗಿದೆ. ತಿರುವಣ್ಣಾಮಲೈನ ಅಣ್ಣಾಮಲೈಯಾರ್ ದೇವಸ್ಥಾನದ ಹಿಂಭಾಗದ ಬೆಟ್ಟದ ತಪ್ಪಲಿನಲ್ಲಿ ಭಾರೀ ಮಳೆಯಾಗಿದ್ದು, ಭಾನುವಾರ ಭೂಕುಸಿತ ಸಂಭವಿಸಿದೆ. ಭೂಕುಸಿತ ಮತ್ತು ಬಂಡೆ ಕುಸಿತದಿಂದಾಗಿ ಈ ಪ್ರದೇಶದ ಎರಡು ಮನೆಗಳು ಅವಶೇಷಗಳಡಿ ಸಿಲುಕಿವೆ ಎಂಬ ಮಾಹಿತಿ ಲಭ್ಯವಾಗಿದೆ. ಏಳು ಜನ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ನೆರೆಹೊರೆಯವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಜಿಲ್ಲಾಧಿಕಾರಿ ಭಾಸ್ಕರ್ ಪಾಂಡಿಯನ್ ಕೂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದ್ದು, ರಕ್ಷಣಾ ಕಾರ್ಯಾಚರಣೆ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ 170 ಜನರ ನೇಮಕ:35 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ, 50 ತಿರುವಣ್ಣಾಮಲೈ ಜಿಲ್ಲಾ ಪೊಲೀಸ್ ಕಮಾಂಡೋ ಸಿಬ್ಬಂದಿ, 20 ರಾಜ್ಯ ರಕ್ಷಣಾ ತಂಡದ ಸಿಬ್ಬಂದಿ, 40 ತಿರುವಣ್ಣಾಮಲೈ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ ಮತ್ತು 60 ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 170 ಜನರನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ನಿಯೋಜಿಸಲಾಗಿದೆ.

ಜಿಲ್ಲಾಧಿಕಾರಿ ಭಾಸ್ಕರ್​ ಪಾಂಡಿಯನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರನ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಹಾಯಕ ಕಮಾಂಡರ್ ಶ್ರೀಧರ್ ಅವರು ನಿರಂತರ ನಿಗಾ ವಹಿಸಿದ್ದಾರೆ. ಲೋಕೋಪಯೋಗಿ ಸಚಿವ ಇ.ವಿ. ವೇಲು ಭೂಕುಸಿತದಲ್ಲಿ ಸಿಲುಕಿರುವವರನ್ನು ರಕ್ಷಿಸಲು ತಜ್ಞರ ಮೊರೆ ಹೋಗಿದ್ದಾರೆ.

''ಸೋಮವಾರ ಎರಡನೇ ದಿನವೂ ಭೂಕುಸಿತ ಮುಂದುವರಿದಿದ್ದು, ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಲಾಗಿದೆ. ಪ್ರಸ್ತುತ ತಿರುವಣ್ಣಾಮಲೈ ಜಿಲ್ಲೆಯಲ್ಲಿ 1965ರ ನಂತರ ಅತಿ ಹೆಚ್ಚು ಮಳೆಯಾಗುತ್ತಿದ್ದು, ನಾಲ್ವರು ಯುವತಿಯರು, ಓರ್ವ ಪುರುಷ, ಪತಿ - ಪತ್ನಿ ಸೇರಿದಂತೆ ಒಟ್ಟು ಏಳು ಜನ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಮತ್ತೊಂದು ದೊಡ್ಡ ಬಂಡೆ ಬೀಳಲಿರುವುದರಿಂದ ರಕ್ಷಣಾ ತಂಡ ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ. ಚೆನ್ನೈನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕರು ಮತ್ತು ತಜ್ಞರ ತಂಡ ಇಂದು ಇಲ್ಲಿಗೆ ಬರಲಿದೆ'' ಎಂದು ಸಚಿವ ವೇಲು ತಿಳಿಸಿದ್ದಾರೆ.

ಎರಡು ದಿನಗಳಿಂದ ಭಾರಿ ಮಳೆ:ಕಳೆದ ಎರಡು ದಿನಗಳಿಂದ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹಲವರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಗಿದೆ. ತಮಿಳುನಾಡು ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯಿಂದ ಜಿಲ್ಲೆಯಲ್ಲಿ 36 ಪರಿಹಾರ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, ಚಂಡಮಾರುತದ ಹಿನ್ನೆಲೆಯಲ್ಲಿ ಆಶ್ರಯ ಅಗತ್ಯವಿರುವವರಿಗೆ ಸಂಪನ್ಮೂಲಗಳು ಲಭ್ಯವಿವೆ ಎಂದು ಖಾತ್ರಿಪಡಿಸಿದೆ. ತಿರುವಣ್ಣಾಮಲೈ ನಗರವನ್ನು ಹೊರತುಪಡಿಸಿ ಪೋಲೂರ್ ಮತ್ತು ಕಲಸಪಕ್ಕಂ ಪ್ರದೇಶಗಳಲ್ಲಿ ಮಳೆ ಸಂಬಂಧಿತ ಅವಘಡದಿಂದ ಇಬ್ಬರು ಯುವತಿಯರು ಮೃತಪಟ್ಟಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.

ದನ್ನೂ ಓದಿ:ಕೇರಳದಲ್ಲಿ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ: ಶಬರಿಮಲೆ ಸೇರಿ ಹಲವೆಡೆ ಇಂದು ಭಾರೀ ಮಳೆ ಮುನ್ಸೂಚನೆ

ABOUT THE AUTHOR

...view details