ವಾರಾಣಸಿ (ಉತ್ತರ ಪ್ರದೇಶ):ವಾರಾಣಸಿಯ ತುಳಸಿ ಘಾಟ್ ಬಳಿ ಗಂಗಾ ನದಿಯಲ್ಲಿ ಕರ್ನಾಟಕದ 65 ವರ್ಷ ಪ್ರಾಯದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಭೇಲುಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಈ ಘಟನೆ ನಡೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವು ಶವವನ್ನು ಪತ್ತೆ ಮಾಡಿದ್ದು, ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಮೃತರನ್ನು ಕರ್ನಾಟಕದ ನಿವಾಸಿ ಶ್ರೀನಿವಾಸನ್ ಎಂದು ಗುರುತಿಸಲಾಗಿದೆ. ಕಳೆದ ಹಲವು ದಿನಗಳಿಂದ ಅವರು ಭೇಲುಪುರದ ಹೋಟೆಲ್‌ನಲ್ಲಿ ತಂಗಿದ್ದರು. ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಲು ವಾರಾಣಸಿಗೆ ತೆರಳಿದ್ದರು.
ವಾಸ್ತವ್ಯದ ಸಮಯದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದರು. ಆದರೆ ಘಟನೆಯ ದಿನ ಅವರು "ಗಂಗೆಗೆ ನನ್ನನ್ನು ಅರ್ಪಿಸಲಿದ್ದೇನೆ" ಎಂದು ಸಂದೇಶ ಕಳುಹಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಿವಾಸನ್ ಜೊತೆ ಸಂಪರ್ಕ ಕಳೆದುಕೊಂಡ ಬಳಿಕ ಆತಂಕಗೊಂಡ ಕುಟುಂಬವು ಭೇಲುಪುರ ಪೊಲೀಸರನ್ನು ಸಂಪರ್ಕಿಸಿತ್ತು. ಸಂದೇಶ ಕಳುಹಿಸಿದ ನಂತರ ತಂದೆಯ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಅವರ ಮಗ ಸಿದ್ಧಾರ್ಥ್ ಪೊಲೀಸರಿಗೆ ತಿಳಿಸಿದ್ದರು. ಈ ಮಾಹಿತಿ ಪಡೆದ ಪೊಲೀಸರು, ತಕ್ಷಣ ಶೋಧ ಕಾರ್ಯ ಆರಂಭಿಸಿ ಅಸ್ಸಿ ಘಾಟ್ ಬಳಿ ಮೊಬೈಲ್ ಫೋನ್ ಇರುವುದನ್ನು ಪತ್ತೆ ಮಾಡಿದ್ದರು.
ಬಳಿಕ, ಪೊಲೀಸರು, ಈಜು ನಿಪುಣರು ಮತ್ತು ಎನ್‌ಡಿಆರ್‌ಎಫ್ ತಂಡದ ನೆರವಿನೊಂದಿಗೆ ಹುಡುಕಾಟ ಆರಂಭಿಸಿದ್ದರು. ನಂತರ ತುಳಸಿ ಘಾಟ್ ಬಳಿಯಿಂದ ಶ್ರೀನಿವಾಸನ್ ಅವರ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಬೇಲುಪುರ ಪೊಲೀಸ್ ಠಾಣಾಧಿಕಾರಿ ಪಂಕಜ್ ಅವರು ಈ ಬಗ್ಗೆ ಮಾಹಿತಿ ದೃಢಪಡಿಸಿದ್ದಾರೆ. ಕುಟುಂಬದಿಂದ ಕರೆ ಸ್ವೀಕರಿಸಿದ ಪೊಲೀಸರು ತಕ್ಷಣ ಕಾರ್ಯನಿರ್ವಹಿಸಿ ಮೃತದೇಹವನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಘಟನೆಯ ಕುರಿತು ಶ್ರೀನಿವಾಸನ್ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪಂಕಜ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ನಿರ್ಮಾಣ ಹಂತದ ಕಟ್ಟಡ ಕುಸಿತ; ಅವಶೇಷಗಳಡಿ ಸಿಲುಕಿರುವ 25 ಕಾರ್ಮಿಕರು