ಶ್ರೀನಗರ:ಕಳೆದ 52ದಿನಗಳಿಂದ ಶಾಂತಿ ಮತ್ತು ಸುವ್ಯವಸ್ಥೆಯೊಂದಿಗೆ ಸರಾಗವಾಗಿ ನಡೆದ ಅಮರನಾಥ ಯಾತ್ರೆ ಶ್ರಾವಣ ಪೌರ್ಣಿಮೆಯ ದಿನವಾದ ಇಂದು ಮುಕ್ತಾಯವಾಗುತ್ತಿದೆ. ಈ ವರ್ಷದ ಈ ಅಮರನಾಥ ಯಾತ್ರೆಯಲ್ಲಿ ಸುಮಾರು 5 ಲಕ್ಷ ಯಾತ್ರಿಕರು ಹಿಮಲಿಂಗದ ದರ್ಶನ ಪಡೆದಿದ್ದಾರೆ.
ಕೊನೆಯ ದಿನವಾದ ಇಂದು ಮಹಂತ್ ಸ್ವಾಮಿ ದೀಪೇಂದ್ರ ಗಿರಿ ಅವರು ಛಾರಿ ಮುಬಾರಕ್ (ಪವಿತ್ರ ಬೆಳ್ಳಿಯ ದಂಡ) ಹೊತ್ತೊಯ್ಯಲಿದ್ದಾರೆ. ಪಂಚತಾರ್ಣಿಯದಿಂದ ಅವರು ಪ್ರಯಾಣ ಬೆಳೆಸಲಿದ್ದಾರೆ. ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದಾಗಿರುವ ಈ ಯಾತ್ರೆ ಜೂನ್ 29ರಂದು ಆರಂಭವಾಗಿದ್ದು, ಬಿಗಿ ಭದ್ರತೆಯೊಂದಿಗೆ ಸಾಗಿತ್ತು. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.
ಎರಡು ಮಾರ್ಗವಾಗಿ ಅಮರನಾಥ ಯಾತ್ರೆ ಕೈಗೊಳ್ಳಲಾಗಿತ್ತು. ಜಮ್ಮುವಿನಿಂದ ಬಾಲ್ಟಾಲ್ ಮತ್ತು ಪಹಲ್ಗಾಮ್ ಎರಡು ಬೇಸ್ ಮೂಲಕ ಈ ಯಾತ್ರೆ ಸಾಗಿತ್ತು. ಈ ಯಾತ್ರಾ ಮಾರ್ಗದುದ್ದಕ್ಕೂ ಪೊಲೀಸರು ಮತ್ತು ಸಿಎಪಿಎಫ್ ಭದ್ರತೆ ನೀಡಿದ್ದರು. ವೃತ್ತಿಪರ ಮತ್ತು ತಾಂತ್ರಿಕ ಸುಸಜ್ಜಿತ ಭದ್ರತೆಯನ್ನು ನಡೆಸಲಾಗಿದ್ದು, ಸ್ಥಳೀಯರು ಸಂಪೂರ್ಣ ಸಹಕಾರದಿಂದ ಯಾತ್ರೆ ಯಶಸ್ವಿಯಾಗಿ ಸಾಗಿತು.
ಅಂತಿಮ ದಿನವಾದ ಇಂದು ಭಕ್ತರೊಂದಿಗೆ ಸಾಧುಗಳು ಪಂಚತಾರ್ಣಿಯಿಂದ ಯಾತ್ರೆ ಪ್ರಾರಂಭಿಸಿದ್ದು, ಸಮುದ್ರಮಟ್ಟದಿಂದ 3888 ಮೀಟರ್ ಎತ್ತರದಲ್ಲಿರುವ ಹಿಮಲಿಂಗದ ದರ್ಶನ ಪಡೆಯಲಿದ್ದಾರೆ. ಪೂರ್ಣಿಮೆಯ ಆರಂಭದಿಂದ ಇಲ್ಲಿ ಹಿಮದ ಆಕೃತಿ ಶಿವಲಿಂಗ ಬೆಳೆಯುತ್ತದೆ ಮತ್ತು ಕ್ಷೀಣಿಸುತ್ತದೆ. ಈ ದೇಗುಲವು ಶಿವನ ಪೌರಾಣಿಕ ಶಕ್ತಿಯನ್ನು ಹೊಂದಿದೆ ಎಂಬ ನಂಬಿಕೆ ಇದೆ.