ಹೈದರಾಬಾದ್: ಈ ಮಗು ಬದುಕುವುದೇ ಇಲ್ಲ ಎಂಬ ಸ್ಥಿತಿಯಲ್ಲಿ ವೈದ್ಯರ ನಿರಂತರ ಪ್ರಯತ್ನದಿಂದ ಬದುಕುಳಿಯುವ ಹೃದಯಸ್ಪರ್ಶಿ ಕಥೆ ಇಲ್ಲಿದೆ. ಮಗು ಜನಿಸುವಾಗ ಕೇವಲ 500 ಗ್ರಾಂ ತೂಕ ಹೊಂದಿತ್ತು. ಹೀಗೆ ಕಡಿಮೆ ತೂಕದೊಂದಿಗೆ ಜನಿಸಿದ ಹೆಣ್ಣು ಮಗು ನಂಬಲಾಗದಷ್ಟು ಚೇತರಿಸಿಕೊಂಡಿದೆ. ಇದಕ್ಕೆ ಕಾರಣವಾಗಿದ್ದು, ಎಸ್ ಆರ್ ನಗರದ ಸೌಮ್ಯ ಆಸ್ಪತ್ರೆಯ ವೈದ್ಯರು. ಇಲ್ಲಿನ ವೈದ್ಯರಿಗೆ ಕುಟುಂಬದವರು ಧನ್ಯವಾದಗಳನ್ನು ಹೇಳಿದ್ದಾರೆ.
ಮಗುವಿನ ತಾಯಿ 26 ವಾರಗಳ ಗರ್ಭಿಣಿ ಯಾಗಿದ್ದರು. ಜುಲೈ 30 ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗೆ ದಾಖಲಾದ ಮಹಿಳೆಗೆ ಕೇವಲ ಅರ್ಧ ಕಿಲೋ ತೂಕ ಹೊಂದಿದ್ದ ಹೆಣ್ಣು ಮಗು ಜನಿಸಿತ್ತು. ಅವಧಿಪೂರ್ವ ಜನಿಸಿದ ಮಗುವನ್ನು ವೈದ್ಯರು ತಕ್ಷಣವೇ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಿದ್ದರು.
ನಾಲ್ಕೈದು ತಿಂಗಳು ಸತತ ನಿಗಾ:ಈ ಸಣ್ಣ ಶಿಶುಗಳು ಅಪರೂಪದಲ್ಲಿ ಅಪರೂಪ ಎಂಬಂತೆ ಬದುಕುಳಿಯುತ್ತವೆ. ಈ ಮಗುವನ್ನು ಉಳಿಸಿಕೊಳ್ಳಲು ನಾವು ನಾವು ಎಲ್ಲವನ್ನೂ ನೀಡಿದ್ದೇವೆ ಅಂತಾರೆ ತಿಂಗಳುಗಳು ಕಾಲ ಆರೈಕೆ ಮಾಡಿದ್ದ ನಿಯೋನಾಟಾಲಜಿಸ್ಟ್ ಡಾ.ಕೆ.ರವಿಶಂಕರ್. ಮಗು NICU ನಲ್ಲಿ ಮೂರು ತಿಂಗಳ ಕಾಲ ನಿರಂತರ ಆರೈಕೆಯಲ್ಲಿತ್ತು. ನಿರಂತರ ನಿಗಾದಿಂದಾಗಿ ಅವಳ ಸ್ಥಿತಿ ಸುಧಾರಿಸಿದೆ. ಹೀಗೆ ಸುಧಾರಣೆ ಕಂಡ ಬಂದ ನಂತರ ಅವಳನ್ನು ಮತ್ತೆ ಒಂದೂವರೆ ತಿಂಗಳು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಿ ನಿರಂತರವಾಗಿ ಆರೈಕೆ ಮಾಡಲಾಯಿತು ಎಂದು ರವಿಶಂಕರ್ ಹೇಳಿದರು.
ಸಂಪೂರ್ಣ ಚೇತರಿಕೆ ಬಳಿಕ ಬಿಡುಗಡೆ:ವೈದ್ಯರ ತೀವ್ರ ನಿಗಾ ಹಾಗೂ ಆರೈಕೆಯಿಂದಾಗಿ 500 ಗ್ರಾಂ ತೂಕ ಹೊಂದಿದ್ದ ಮಗು ನಿಧಾನವಾಗಿ ತನ್ನ ತೂಕ ಹೆಚ್ಚಿಸಿಕೊಂಡಿತು. ನಾಲ್ಕೈದು ತಿಂಗಳ ನಿರಂತರ ಆರೈಕೆ ಬಳಿಕ ಮಗು 1 ಕೆಜಿ 950 ಗ್ರಾಂಗೆ ತಲುಪಿತು. ಅಂತಿಮವಾಗಿ ಮಗು ಎಲ್ಲ ರೀತಿಯಲ್ಲೂ ಆರೋಗ್ಯವಾಗಿದೆ ಎಂಬುದು ಖಚಿತವಾದ ಬಳಿಕ ತಾಯಿಯೊಂದಿಗೆ ಸುರಕ್ಷಿತವಾಗಿ ಮನೆಗೆ ಕಳುಹಿಸಿ ಕೊಡಲಾಗಿದೆ. ಇದು ಆ ತಾಯಿಯ ಎರಡನೇ ಮಗು, ಈ ಹಿಂದೆ ಅವಳಿ ಗಂಡು ಮಕ್ಕಳಿಗೆ ಇವರು ಜನ್ಮ ನೀಡಿದ್ದರು.