ಸಂಬಲ್‌ಪುರ (ಒಡಿಶಾ): ಸಂಬಲ್‌ಪುರ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳ ಮಹಿಳೆಯರನ್ನು ಸಾಮಾನ್ಯವಾಗಿ ಮೂಲೆಗುಂಪು ಮಾಡಲಾಗುತ್ತದೆ. ಕುಟುಂಬಕ್ಕೆ ಆದಾಯ ಗಳಿಸುವುದಕ್ಕಾಗಿ ಇವರನ್ನ ದೂರದ ನಗರಗಳಿಗೆ ಕಳುಹಿಸಲಾಗುತ್ತದೆ. ಇವರಲ್ಲಿ ಹೆಚ್ಚಿನ ಯುವತಿಯರು ಮಾನವ ಕಳ್ಳಸಾಗಣೆದಾರರಿಗೆ ಬಲಿಯಾಗುತ್ತಿರುವುದು ಈ ಸಮುದಾಯದವರ ಆತಂಕವನ್ನ ಹೆಚ್ಚಿಸಿದೆ. ಹೀಗಾಗಿ, ಬುಡಕಟ್ಟು ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವ ಮೂಲಕ ಕಳ್ಳಸಾಗಣೆಯನ್ನ ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಸಮಾನ ಮನಸ್ಕ ಜನರು ಒಗ್ಗೂಡಿ ತರಬೇತಿ ಶಿಬಿರವನ್ನ ಆಯೋಜಿಸಿದ್ದಾರೆ.
ಬ್ಯೂಟಿಷಿಯನ್ ಮತ್ತು ಉದ್ಯಮಿ ಪುಷ್ಪಾಂಜಲಿ ಮಹಾಕುರ್ ಮತ್ತು ಸ್ವರ್ಣನಾರಿ ದೇವಿ ಕಲ್ಯಾಣ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲೆಯ ಆದಿವಾಸಿಗಳಿಗಾಗಿ ಕೆಲಸ ಮಾಡುವ ಕಾರ್ಯಕರ್ತೆ ಸಂಜುಲತಾ ನಾಯಕ್ ಅವರು ಬುಡಕಟ್ಟು ಜನಾಂಗದ ಮಹಿಳೆಯರನ್ನು ವೃತ್ತಿಪರ ಸೌಂದರ್ಯ ಹಾಗೂ ಮೇಕಪ್ ತರಬೇತಿದಾರರನ್ನಾಗಿ ಸಜ್ಜುಗೊಳಿಸುವ ಮೂಲಕ ಸ್ವಾವಲಂಬಿಯಾಗಳನ್ನಾಗಿಸಲು ಕೈಜೋಡಿಸಿದರು.
ಅವರು ಜಿಲ್ಲೆಯ 35 ಬುಡಕಟ್ಟು ಮಹಿಳೆಯರಿಗೆ ಮೂರು ದಿನಗಳ ಕಾರ್ಯಾಗಾರವನ್ನು ಆಯೋಜಿಸಿದರು ಮತ್ತು ಅಹಮದಾಬಾದ್‌ನ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಧೀರಾ ಕಪೂರ್ ಮತ್ತು ರಾಜೇಶ್ ಪರೇಖ್ ಅವರಂತಹ ವೃತ್ತಿಪರ ತರಬೇತುದಾರರನ್ನು ಕರೆದು ಸಾಫ್ಟ್ ಸ್ಕಿಲ್ ತರಬೇತಿಯನ್ನು ನೀಡಿದರು.
ಮೂಲ ತರಬೇತಿಯೊಂದಿಗೆ ಈ ಬುಡಕಟ್ಟು ಮಹಿಳೆಯರಿಗೆ ಉದ್ಯೋಗ ನೀಡಲಾಗುವುದು ಅಥವಾ ಬ್ಯೂಟಿ ಪಾರ್ಲರ್ ಪ್ರಾರಂಭಿಸಲು ಸಹಾಯ ಮಾಡಲಾಗುವುದು ಎಂದು ಸಂಘಟಕರು ಭರವಸೆ ನೀಡಿದರು.