ನವದೆಹಲಿ:ಗ್ರೇಟರ್ ನೊಯ್ಡಾದ ಸೂರಜ್‌ಪುರ ಕೊಟ್ಟಾಲಿ ಎಂಬ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದು ಕುಸಿದು ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ನಿನ್ನೆ ದಿನ ದೆಹಲಿ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ, ಇದರಿಂದಾಗಿ ಸೂರಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖೋಡ್ನಾ ಕಾಲಾ ಎಂಬ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆ ಕುಸಿದು ಬಿದ್ದಿದೆ. ಈ ವೇಳೆ, ಅದರಲ್ಲಿ ಆಟವಾಡುತ್ತಿದ್ದ 8 ಮಕ್ಕಳು ಅವಶೇಷಗಳಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೂಡಲೇ ಗ್ರಾಮಸ್ಥರು ಮತ್ತು ಪೊಲೀಸರು ಅವಶೇಷಗಳಡಿ ಸಿಲುಕಿದ್ದ ಎಲ್ಲ ಮಕ್ಕಳನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೇ ಮೂವರು ಮಕ್ಕಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಉಳಿದಂತೆ ಆಯೇಷಾ, ಹುಸೇನ್, ಸೋಹ್ನಾ, ವಾಸಿಲ್ ಮತ್ತು ಸಮೀರ್ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿ ನೀಡಿರುವ ಪೊಲೀಸ್ ಕಮಿಷನರ್ ಶಿವಹರಿ ಮೀನಾ, 8 ಮಕ್ಕಳು ನಿರ್ಮಾಣ ಹಂತದ ಕಟ್ಟಡದಲ್ಲಿ ಆಟವಾಡುತ್ತಿದ್ದ ವೇಳೆ ಜೋರಾಗಿ ಮಳೆ ಬಂದಿದೆ. ಇದರಿಂದ ಏಕಾಏಕಿ ಕಟ್ಟಡ ಕುಸಿದು ಮಕ್ಕಳೆಲ್ಲ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ಸ್ಥಳೀಯರು ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ಅಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಗ್ರಾಮಸ್ಥರೊಂದಿಗೆ ಸೇರಿ ಎಲ್ಲಾ ಮಕ್ಕಳನ್ನು ರಕ್ಷಣೆ ಮಾಡಿ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಹದ್, ಆದಿಲ್ ಮತ್ತು ಅಲ್ಫಿಜಾ ಎಂಬ ಮೂವರು ಮಕ್ಕಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಉಳಿದಂತೆ ಗಂಭೀರವಾಗಿ ಗಾಯಗೊಂಡು ಐವರು ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ದೆಹಲಿ ಏರ್ಪೋರ್ಟ್ ಮೇಲ್ಛಾವಣಿ ಕುಸಿತ: ಬೆಂಗಳೂರು-ದೆಹಲಿ 18 ವಿಮಾನಗಳ ಹಾರಾಟ ರದ್ದು - Bengaluru Delhi Flights Cancelled