ಜಮ್ಮು: ಕಳೆದೊಂದು ತಿಂಗಳಿನಿಂದ ಸಾಗಿರುವ ಪವಿತ್ರ ಅಮರನಾಥ ಯಾತ್ರೆಯಲ್ಲಿ 4.71 ಲಕ್ಷ ಯಾತ್ರಿಕರು ಭಾಗಿಯಾಗಿದ್ದು, ಹೊಸ ದಾಖಲೆ ಬರೆದಿದೆ. ಕಳೆದ ವರ್ಷ ಸಂಪೂರ್ಣ ಅಮರನಾಥ ಯಾತ್ರೆಯಲ್ಲಿ 4.54 ಲಕ್ಷ ಯಾತ್ರಿಕರು ಪಾಲ್ಗೊಂಡು ಶಿವಲಿಂಗದ ದರ್ಶನ ಪಡೆದಿದ್ದರು. ಈ ಬಾರಿ ಯಾತ್ರೆ ಪೂರ್ಣಗೊಳ್ಳಲು ಇನ್ನೂ 20 ದಿನ ಬಾಕಿ ಉಳಿದಿದ್ದು, ಕಳೆದ 32 ದಿನಗಳಲ್ಲಿ ದಾಖಲೆ ಮಟ್ಟದಲ್ಲಿ ಯಾತ್ರಿಕರು ದರ್ಶನ ಪಡೆದಿದ್ದಾರೆ.
ಇಂದು 1,654 ಯಾತ್ರಿಕರನ್ನು ಒಳಗೊಂಡ ಹೊಸ ಬ್ಯಾಚ್ ಜಮ್ಮುವಿನ ಭಗವತಿ ನಗರ್ ಯಾತ್ರಿ ನಿವಾಸ್‌ನಿಂದ ಎರಡು ಭದ್ರತಾ ಪಡೆಯೊಂದಿಗೆ ಮುಂಜಾನೆ 3.20ಕ್ಕೆ ಹೊರಟಿತು. ನಿನ್ನೆ 5 ಸಾವಿರ ಯಾತ್ರಿಕರು ದರ್ಶನ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊದಲ ಬೆಂಗಾವಲು ಪಡೆಯಲ್ಲಿ 17 ವಾಹನದಲ್ಲಿ 456 ಯಾತ್ರಿಕರು ಉತ್ತರ ಕಾಶ್ಮೀರದ ಬಲ್ಟಾಲ್ ಬೇಸ್ ಕ್ಯಾಂಪ್ನಿಂದ ತೆರಳಿದ್ದಾರೆ. ಎರಡನೇ ಬೆಂಗಾವಲು ಪಡೆಯಲ್ಲಿ 34 ವಾಹನದಲ್ಲಿ 1,198 ಯಾತ್ರಿಕರು ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಬೇಸ್ ಕ್ಯಾಂಪ್ನಿಂದ ತೆರಳಿದ್ದಾರೆ.
ಯಾತ್ರೆಯನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಭದ್ರತೆ, ಸಮುದಾಯ ಅಡುಗೆ ಕೋಣೆಗಳು, ಸಾರಿಗೆ ಮತ್ತು ಬೇಸ್ ಕ್ಯಾಂಪ್‌ಗಳು ಮತ್ತು ಜಮ್ಮುವಿನಿಂದ ಕಾಶ್ಮೀರದವರೆಗಿನ ಹೆದ್ದಾರಿಯುದ್ದಕ್ಕೂ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.