ನವದೆಹಲಿ:ರಾಜಕೀಯ ಪಕ್ಷಗಳು ರಾಷ್ಟ್ರವ್ಯಾಪಿ ಸದಸ್ಯತ್ವ ಅಭಿಯಾನ ಆರಂಭಿಸಿವೆ. ಕಾಂಗ್ರೆಸ್ ಕೂಡ ಅಭಿಯಾನ ನಡೆಸುತ್ತಿದ್ದು, ಕೇವಲ20 ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮಹಿಳಾ ವಿಭಾಗದಲ್ಲಿ ಸದಸ್ಯತ್ವ ಪಡೆದಿದ್ದಾರೆ ಎಂದು ಶನಿವಾರ ತಿಳಿಸಿದೆ.
ಅಖಿಲ ಭಾರತ ಮಹಿಳಾ ಕಾಂಗ್ರೆಸ್ನ (ಎಐಎಂಸಿ) ಸಂಸ್ಥಾಪನಾ ದಿನವಾದ ಸೆಪ್ಟೆಂಬರ್ 15 ರಂದು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿತ್ತು. ಅಂದಿನಿಂದ ನಡೆದ ನೋಂದಣಿಯಲ್ಲಿ 2 ಲಕ್ಷಕ್ಕೂ ಅಧಿಕ ಮಹಿಳೆಯರು ಪಕ್ಷ ಸೇರ್ಪಡೆಯಾಗಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ಘೋಷಿಸಿದಂತೆ 'ಮಹಿಳೆಯರಿಗೆ ನ್ಯಾಯ ಖಚಿತ'ವು ಜನರನ್ನು ಸೆಳೆದಿದೆ. ಹರಿಯಾಣ ವಿಧಾನಸಭೆ ಚುನಾವಣೆಯಲ್ಲೂ ಈ ವಿಷಯದ ಮೇಲೆ ಹೆಚ್ಚಿನ ಪ್ರಚಾರ ಮಾಡಿದೆ. ಇದರಿಂದ ಮಹಿಳಾ ಬೆಂಬಲ ಪಕ್ಷಕ್ಕೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 90 ಸ್ಥಾನಗಳಲ್ಲಿ 12 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ. ಇದರ ಪರಿಣಾಮವನ್ನು ಚುನಾವಣಾ ಫಲಿತಾಂಶದಲ್ಲಿ ಕಾಣಬಹುದು ಎಂದು ಲಂಬಾ ಹೇಳಿದರು.
ಹರಿಯಾಣ ಚುನಾವಣೆಗೂ ಮೊದಲು ಕೇಂದ್ರ ರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತಂದಿದ್ದರೆ, ಕನಿಷ್ಠ 33 ಪ್ರತಿಶತದಷ್ಟು ಮಹಿಳೆಯರು ಚುನಾವಣಾ ಕಣದಲ್ಲಿರುತ್ತಿದ್ದರು. ರಾಜಕೀಯದಲ್ಲಿ ಅವರ ನ್ಯಾಯಯುತ ಪಾಲು ಹೆಚ್ಚುತ್ತಿತ್ತು ಎಂದು ಪ್ರತಿಪಾದಿಸಿದರು.
ಹರಿಯಾಣದಲ್ಲಿ ಬಿಜೆಪಿ ಆಡಳಿತದಿಂದಾಗಿ ಹಣದುಬ್ಬರ ಹೆಚ್ಚಿದೆ. ಇದು ಮಹಿಳೆಯರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಉಂಟು ಮಾಡಿದೆ. ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ನಲ್ಲಿ ಅನರ್ಹರಾಗಿ ಕ್ರೀಡೆಯಿಂದಲೇ ಹೊರಬಿದ್ದಾಗ ಅವರ ಪರವಾಗಿ ಹೋರಾಡಿದ್ದು ಕಾಂಗ್ರೆಸ್. ಪ್ರಧಾನಿ ಮೋದಿ ಮತ್ತು ಬಿಜೆಪಿ ಅವರನ್ನು ಬೆಂಬಲಿಸಲಿಲ್ಲ. ಆದರೆ, ನಮ್ಮ ಪಕ್ಷ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಗೌರವ ನೀಡಿದೆ ಎಂದು ಅಲ್ಕಾ ಲಂಬಾ ಹೇಳಿದರು.
ಇದನ್ನೂ ಓದಿ:ಚುನಾವಣೋತ್ತರ ಫಲಿತಾಂಶ: ಹರಿಯಾಣದಲ್ಲಿ ಕಾಂಗ್ರೆಸ್ಗೆ ಅಧಿಕಾರ, ಜಮ್ಮು ಕಾಶ್ಮೀರದಲ್ಲಿ ಅತಂತ್ರ - assembly election exit polls