ಸೇಲಂ, ತಮಿಳುನಾಡು: ಕಳೆದ ಕೆಲ ದಿನಗಳ ಹಿಂದೆ ನಡೆದಿದ್ದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ನಾಲ್ವರು ಬಾಲಕರ ಬಂಧನವಾಗಿದೆ.
ಏನಿದು ಪ್ರಕರಣ: ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಕಡೈಯಂಬಟ್ಟಿ ಗ್ರಾಮದ ಅರಣ್ಯ ಪ್ರದೇಶಕ್ಕೆ 16 ಮತ್ತು 17 ವರ್ಷದ ಬಾಲಕರಿಬ್ಬರು ತೆರಳಿದ್ದರು. ಈ ವೇಳೆ 16 ವರ್ಷದ ಬಾಲಕಿಯೊಬ್ಬಳು ಎದುರಾಗಿದ್ದಾಳೆ. ಈ ವೇಳೆ ಬಾಲಕರಿಬ್ಬರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ. ಆದರೆ ಬಾಲಕಿ ಅವರಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾಳೆ. ಆದರೆ ಆ ಇಬ್ಬರು ಬಾಲಕರು ಆಕೆಯನ್ನು ಬೆನ್ನಟ್ಟಿ ಹಿಡಿದು ಮಿನಿ ಟೆಂಪೋದಲ್ಲಿ ಅಪಹರಿಸಿಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿದ್ದಾರೆ.
ನಿರ್ಜನ ಪ್ರದೇಶದಲ್ಲಿ ಬಾಲಕರು ಮೊದಲಿಗೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದಾರೆ. ಬಳಿಕ ತಮ್ಮ ಸ್ನೇಹಿತರಿಗೆ ಆ ವಿಡಿಯೋವನ್ನು ಹಂಚಿಕೊಂಡು ತಾವು ಇರುವ ಸ್ಥಳಕ್ಕೆ ಬನ್ನಿ ಅಂತಾ ಹೇಳಿದ್ದಾರೆ. ಆಗ ಮತ್ತಿಬ್ಬರು ಬಾಲಕರು ವಿಡಿಯೋ ನೋಡಿ ಘಟನಾ ಸ್ಥಳಕ್ಕೆ ದೌಡಾಯಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತ ಬಾಲಕಿ ಆರೋಪಿಗಳಿಂದ ತಪ್ಪಿಸಿಕೊಂಡು ಬಂದು ತಮ್ಮ ಪೋಷಕರಿಗೆ ನಡೆದ ಘಟನೆ ಬಗ್ಗೆ ವಿವರಿಸಿದ್ದಾಳೆ. ಆದರೆ ಆರೋಪಿಗಳು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಪೋಷಕರು ಕೂಡಲೇ ದೀವಾಡಿಪಟ್ಟಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ದೀವಾಡಿಪಟ್ಟಿ ಪೊಲೀಸರು ತನಿಖೆ ಕೈಗೊಂಡು ಮೊದಲಿಗೆ ಇಬ್ಬರು ಬಾಲಕರನ್ನು ಬಂಧಿಸಿದ್ದರು. ಮತ್ತಿಬ್ಬರ ಬಂಧನಕ್ಕಾಗಿ ಪೊಲೀಸರು ತಮ್ಮ ಶೋಧ ಕಾರ್ಯ ಮುಂದುವರಿಸಿದ್ದರು. ಫೆಬ್ರುವರಿ 26ರ ಬೆಳಗ್ಗೆ ಪೊಲೀಸರು ಪರಾರಿಯಲ್ಲಿದ್ದ ಬಾಲಕರಿಬ್ಬರನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದರು. ಬಳಿಕ ಅವರೆಲ್ಲರನ್ನೂ ಬಾಲಪರಾಧಿ ಮಂದಿರಕ್ಕೆ ರವಾನಿಸಲಾಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಾಲಕಿಯ ವಿಡಿಯೋವನ್ನು ಡಿಲಿಟ್ ಮಾಡಲು ಸೇಲಂ ಸೈಬರ್ ಕ್ರೈಂ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ಓದಿ:ಸರಣಿ ಅತ್ಯಾಚಾರ ಆರೋಪಿ ಉಮೇಶ್ ರೆಡ್ಡಿಗೆ ಪೆರೋಲ್ ನೀಡಲು ನಿರಾಕರಿಸಿದ ಹೈಕೋರ್ಟ್