ನವದೆಹಲಿ: ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಹೆಚ್ಚಿದೆ. ರಾಷ್ಟ್ರ ರಾಜಧಾನಿಯಲ್ಲಿ ಇಂದು ಕೂಡ ದಟ್ಟ ಮಂಜಿನ ವಾತಾವರಣದಿಂದ ವೀಕ್ಷಣಾ ಸಾಮರ್ಥ್ಯ ಕುಸಿದು ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು.
ಪ್ರತಿಕೂಲ ಹವಾಮಾನದಿಂದಾಗಿ ಅನೇಕ ವಿಮಾನಗಳು ವಿಳಂಬವಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ದಟ್ಟ ಮಂಜಿನ ಹಿನ್ನೆಲೆ ಕಾರ್ಯಾಚರಣೆ ಸವಾಲಾಗಿದ್ದರಿಂದ ದೇಶದ ಅತಿದೊಡ್ಡ ವಿಮಾನ ಸಂಸ್ಥೆಯಾಗಿರುವ ಇಂಡಿಗೋ ತಾತ್ಕಾಲಿಕವಾಗಿ ಹಾರಾಟವನ್ನು ಸ್ಥಗಿತಗೊಳಿಸಿತು.
ಶುಕ್ರವಾರ ಮಧ್ಯರಾತ್ರಿ 12.15ರಿಂದ 1.30ರವರೆಗೆ ಸುಮಾರು 15 ವಿಮಾನಗಳ ಮಾರ್ಗವನ್ನು ಬದಲಾಯಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೀಕ್ಷಣಾ ಸಾಮರ್ಥ್ಯದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಮತ್ತು ಲ್ಯಾಂಡಿಂಗ್ನಲ್ಲಿ ಸಮಸ್ಯೆಯಾಗಿದ್ದು, ಪ್ರಯಾಣಿಕರು ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಸೂಚಿಸಲಾಯಿತು. ಅಲ್ಲದೇ ಈ ಅನಾನೂಕುಲಕ್ಕೆ ವಿಷಾದಿಸುವುದಾಗಿ ಇಂದು ಬೆಳಗ್ಗೆ 6.56ಕ್ಕೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ಸಂಸ್ಥೆ ಪೋಸ್ಟ್ ಮಾಡಿದೆ.
ದೆಹಲಿ ಮಾತ್ರವಲ್ಲದೇ ಉತ್ತರ ಭಾರತದೆಲ್ಲೆಡೆ ಶೀತದ ಅಲೆ ಮತ್ತು ದಟ್ಟ ಮಂಜಿನ ಹೊದಿಕೆ ಕಂಡು ಬಂದಿದೆ. ಅನೇಕ ಕಡೆ ಸುಮಾರು ಶೂನ್ಯ ವೀಕ್ಷಣಾ ಅನುಭವ ಆಗಿದ್ದು, ಇದು ಸಾರಿಗೆ ಸೇವೆ ಸಂಚಾರಕ್ಕೆ ಸವಾಲಾಗಿದೆ. ಎನ್ಸಿಆರ್ ನೋಯ್ಡಾ, ಗ್ರೇಟರ್ ನೋಯ್ಡಾ, ಉತ್ತರಪ್ರದೇಶದ ಗಾಜಿಯಾಬಾದ್ ಮತ್ತು ಗುರುಗ್ರಾಮ್ ಮತ್ತು ಫರಿದಾಬಾದ್ ಹಾಗೂ ಹರಿಯಾಣದಲ್ಲಿ ಕಡಿಮೆ ಗೋಚರತೆಯ ಅನುಭವ ಆಗಿದೆ.