ಬಿಜಾಪುರ (ಛತ್ತೀಸ್‌ಗಢ):ಲೋಕಸಭೆ ಚುನಾವಣೆ ಹೊತ್ತಿನಲ್ಲೇ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಒಟ್ಟು ಮೂವರು ಮಹಿಳೆಯರು ಸೇರಿದಂತೆ 13 ಮಂದಿ ನಕ್ಸಲರು ಹತರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಏಪ್ರಿಲ್ 2 ರಂದು ಆರಂಭವಾದ ನಕ್ಸಲ್ ವಿರೋಧಿ ಕಾರ್ಯಾಚರಣೆಯು ಬುಧವಾರ ಕೊನೆಗೊಂಡಿತು. ಮೂರು ದಿನಗಳ ಕಾಲ ನಡೆದ ಕೂಂಬಿಂಗ್ನಲ್ಲಿ 13 ಮಾವೋವಾದಿಗಳನ್ನು ಭದ್ರತಾ ಪಡೆಗಳು ಬೇಟೆಯಾಡಿವೆ. ಛತ್ತೀಸ್‌ಗಢ ಪೊಲೀಸರು ನಕ್ಸಲ್ ವಿರೋಧಿ ಕಾರ್ಯಾಚರಣೆಯ ಇತಿಹಾಸದಲ್ಲೇ ಅತಿದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಇಲ್ಲಿನ ಬಿಜಾಪುರ ಜಿಲ್ಲೆಯ ಗಂಗಾಲೂರಿನ ಲೆಂಡ್ರಾ ಮತ್ತು ಕೊರ್ಚೋಲಿ ಪ್ರದೇಶಗಳಲ್ಲಿ ಏಪ್ರಿಲ್ 2 ರಂದು ರಾತ್ರಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಆರಂಭಿಸಲಾಯಿತು. 1 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಮೂರು ದಿನಗಳಲ್ಲಿ 13 ನಕ್ಸಲರು ಹತರಾಗಿದ್ದಾರೆ. ಎಲ್ಲ ಮೃತ ದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯ ನಕ್ಸಲರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಬಸ್ತಾರ್ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿ) ಪಿ ಸುಂದರರಾಜ್ ಮಾಹಿತಿ ನೀಡಿದರು.