ಶಹಜಹಾನ್‌ಪುರ (ಉತ್ತರ ಪ್ರದೇಶ): ಮಂಜಿನ ಕಾರಣದಿಂದಾಗಿ ಕಂಟೈನರ್ ಟ್ರಕ್ ಮತ್ತು ಆಟೋ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮಹಿಳೆಯರು ಸೇರಿದಂತೆ 12 ಜನ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಮೃತರೆಲ್ಲರೂ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಹುಣ್ಣಿಮೆ ಹಿನ್ನೆಲೆ ಗಂಗಾ ನದಿಯಲ್ಲಿ ಸ್ನಾನ ಮಾಡಲು ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಅಲಹಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಗ್ಸುಗಿ ಗ್ರಾಮದ ಬಳಿ ಬರೇಲಿ - ಫರೂಕಾಬಾದ್ ರಸ್ತೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಮೃತರನ್ನು ಲಾಲಾ ರಾಮ್ (30), ಪುಟ್ಟು ಲಾಲ್ (50), ಶಿವಪಾಲ್ (45), ಸುರೇಂದ್ರ ಕಶ್ಯಪ್ (50), ಅಂಕುಶ್ (50), ಅನಂತ್ ರಾಮ್ (35), ಬಸಂತ ದೇವಿ (70), ಮಣಿರಾಮ್ (45), ಪೋತಿರಾಮ್ (50), ರಂಪಾ ದೇವಿ (45), ರೂಪಾ ದೇವಿ (50) ಮತ್ತು ಆದೇಶ್ (20) ಎಂದು ಗುರುತಿಸಲಾಗಿದೆ.
ಮೊದಲಿಗೆ ಟ್ಯಾಂಕರ್‌ಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿತ್ತು. ಆದರೆ, ಸ್ಥಳಕ್ಕಾಗಮಿಸಿ ಪರಿಶೀಲನೆ ನಂತರ ಆಟೋ ರಿಕ್ಷಾಗೆ ಕಂಟೈನರ್ ಟ್ರಕ್ ಡಿಕ್ಕಿ ಹೊಡೆದಿರುವುದು ಕಂಡು ಬಂದಿದೆ. ಜಲಾಲಾಬಾದ್ ಕಡೆಯಿಂದ ಫರೂಕಾಬಾದ್‌ಗೆ ಆಟೋ ರಿಕ್ಷಾ ಬರುತ್ತಿತ್ತು. ಈ ಅಪಘಾತದ ಪರಿಣಾಮ ಎಲ್ಲ 12 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರು ಹುಣ್ಣಿಮೆ ಕಾರಣ ಗಂಗಾ ಸ್ನಾನಕ್ಕೆ ಫರೂಕಾಬಾದ್‌ನ ಘಾಟಿಯಾ ಘಾಟ್‌ಗೆ ತೆರಳುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾದಲ್ಲಿದ್ದ ಎಲ್ಲ ಪ್ರಯಾಣಿಕರು ರಸ್ತೆಗೆ ಬಿದ್ದಿದ್ದಾರೆ. ಕೆಲವರು ಎರಡು ವಾಹನಗಳ ನಡುವೆ ಸಿಲುಕಿಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ವೇಳೆ, ಕಂಟೈನರ್ ಟ್ರಕ್ ಚಾಲಕ ವಾಹನ ಸಮೇತವಾಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ, ಟ್ರಕ್ ಅನ್ನು ಅಪಘಾತ ಸ್ಥಳದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿ ಕೈಬಿಟ್ಟು ಹೋಗಿದ್ದಾನೆ. ಆರೋಪಿ ಚಾಲಕನ ಬಂಧನಕ್ಕೆ ಕ್ರಮ ವಹಿಸಲಾಗಿದೆ. ಮತ್ತೊಂದೆಡೆ, ಎಲ್ಲ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಎಸ್ಪಿ ಅಶೋಕ್ ಕುಮಾರ್ ಮೀನಾ ಹೇಳಿದ್ದಾರೆ. ಈ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:ತಮಿಳುನಾಡಿನಲ್ಲಿ ಕರ್ತವ್ಯನಿರತ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ: ಸಿಎಂ ಸ್ಟಾಲಿನ್ ಕಳವಳ